ಬೆಂಗಳೂರು: ‘ಗೃಹ ಜ್ಯೋತಿ’ (200 ಯುನಿಟ್‌ವರೆಗೆ ಉಚಿತ ವಿದ್ಯುತ್) ಯೋಜನೆಯ ಫಲಾನುಭವಿ ಬಾಡಿಗೆದಾರರು ತಮ್ಮ ಮನೆ ಬದಲಿಸಿದರೂ ಈ ಯೋಜನೆಯನ್ನು ಮುಂದುವರಿಸಲು ಇಂಧನ ಇಲಾಖೆ ‘ಡಿ–ಲಿಂಕ್’ ಸೌಲಭ್ಯವನ್ನು ಕಲ್ಪಿಸಿದೆ.
ಮನೆ ಬದಲಿಸಿದ ಬಾಡಿಗೆದಾರರು ತಕ್ಷಣ ಹಳೆ ಮನೆಯ ವಿಳಾಸದ ವಿದ್ಯುತ್ ಸಂಪರ್ಕವನ್ನು ರದ್ದುಪಡಿಸಿ, ‘ಡಿ ಲಿಂಕ್’ ಆಯ್ಕೆ ಮಾಡಿಕೊಂಡು ಹೊಸ ಮನೆಯ ವಿಳಾಸಕ್ಕೆ ‘ಗೃಹ ಜ್ಯೋತಿ’ಯ ಪ್ರಯೋಜನ ಪಡೆಯಬಹುದು.
ಗೃಹ ಜ್ಯೋತಿ ಯೋಜನೆ ಜಾರಿಗೆ ಬಂದ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಬಾಡಿಗೆ ಮನೆಯಲ್ಲಿದ್ದವರು ಬೇರೆ ಬೇರೆ ಕಾರಣಗಳಿಗೆ ಮನೆ ಬದಲಿಸಿದ ಸಂದರ್ಭದಲ್ಲಿ ಹೊಸ ಮನೆಯ ಆರ್‌ಆರ್ ಸಂಖ್ಯೆಗೆ ತಮ್ಮ ಆಧಾರ್ ಜೋಡಣೆ ಮಾಡಿ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯ ಆಗುತ್ತಿರಲಿಲ್ಲ. ಅಲ್ಲದೆ, ಈ ಹಿಂದೆ ಇದ್ದ ಮನೆಯ ವಿದ್ಯುತ್ ಸಂಪರ್ಕಕ್ಕೆ ಜೋಡಣೆಯಾಗಿದ್ದ ಆಧಾರ್ ಸಂಖ್ಯೆಯನ್ನು ರದ್ದುಪಡಿಸಲು ಕೂಡಾ ಆಗುತ್ತಿರಲಿಲ್ಲ. ಇದೀಗ ಈ ಸಮಸ್ಯೆ ಪರಿಹಾರಗೊಂಡಿದೆ. ಹೊಸ ಬಾಡಿಗೆ ಮನೆಯ ಆರ್‌ಆರ್ ಸಂಖ್ಯೆಯನ್ನು ಸುಲಭವಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲಾಗಿದೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಈ ಬದಲಾವಣೆ ಮಾಡಿಕೊಳ್ಳಬಹುದು.
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಮನೆ ಬದಲಾಯಿಸಿದಾಗ ತಮ್ಮ ಖಾತೆಗಳನ್ನು ಡಿ-ಲಿಂಕ್ ಮಾಡಲು ಮತ್ತು ವಿಳಾಸ ಬದಲಾವಣೆ ಮತ್ತು ಸ್ಥಳಾಂತರದ ನಂತರ ಮರು ಲಿಂಕ್ ಅವಕಾಶ ಕಲ್ಪಿಸುವ ಪ್ರಕ್ರಿಯೆ ಆರಂಭಿಸುವಂತೆ ವಿದ್ಯುತ್ ಸರಬರಾಜು ನಿಗಮಗಳಿಗೆ (ಎಸ್ಕಾಂ) ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.