ADVERTISEMENT

ಗೃಹಲಕ್ಷ್ಮಿಗೆ ಜೀವಿತ ಪ್ರಮಾಣಪತ್ರ: ಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 15:40 IST
Last Updated 7 ಫೆಬ್ರುವರಿ 2026, 15:40 IST
ದಿನೇಶ್‌ ಗೂಳಿಗೌಡ
ದಿನೇಶ್‌ ಗೂಳಿಗೌಡ   

ಬೆಂಗಳೂರು: ‘ಗೃಹ ಲಕ್ಷ್ಮಿ’ ಯೋಜನೆಯ ಫಲಾನುಭವಿಗಳು ಜೀವಿತ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಪರಿಶೀಲಿಸಿ, ತಕ್ಷಣ ಕ್ರಮ ವಹಿಸುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಕಾಂಗ್ರೆಸ್ ಸದಸ್ಯ ದಿನೇಶ ಗೂಳಿಗೌಡ ಮನವಿ ಸಲ್ಲಿಸಿದ್ದರು.

ಮನವಿಯಲ್ಲಿ ಏನಿತ್ತು: ‘ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ₹ 2 ಸಾವಿರ ಪಾವತಿಸಲಾಗುತ್ತಿದ್ದು, 1,24,12,543 ಅರ್ಹ ಫಲಾನುಭವಿಗಳಿಗೆ ಈವರೆಗೂ ಸುಮಾರು ₹ 57,300 ಕೋಟಿ ಪಾವತಿಸಲಾಗಿದೆ. ಆದರೆ, ಕೆಲವು ಕಡೆ ಮರಣ ಹೊಂದಿರುವ ಫಲಾನುಭವಿಗಳ ಹೆಸರಿನಲ್ಲಿ ಈ ಯೋಜನೆಯಡಿ ಹಣ ಪಾವತಿ ಆಗುತ್ತಿದೆ. ಅದನ್ನು ತಡೆಗಟ್ಟಬೇಕಿದೆ. ಆ ಮೂಲಕ, ಸರ್ಕಾರವು ಪಾವತಿಸುವ ಮೊತ್ತವು ಸದ್ವಿನಿಯೋಗವಾಗಲು ಹಾಗೂ ಅರ್ಹ ಫಲಾನುಭವಿಗಳಿಗೆ ವಿತರಿಸಲು ಕ್ರಮ ವಹಿಸಬೇಕು’ ಎಂದು ದಿನೇಶ ಗೂಳಿಗೌಡ ಮನವಿ ಮಾಡಿದ್ದರು.

ADVERTISEMENT

‘ನಿವೃತ್ತ ಸರ್ಕಾರಿ ನೌಕರರಿಗೆ ಪಾವತಿಸುವ ಪಿಂಚಣಿ ಮೊತ್ತವನ್ನು ಪಡೆಯಲು ಅವರು ಪ್ರತಿವರ್ಷ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ತಮ್ಮ ಜೀವಿತ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅದೇ ಮಾದರಿಯನ್ನು ಗೃಹ ಲಕ್ಷ್ಮಿಗೂ ಅನ್ವಯಿಸಬೇಕು’ ಎಂದೂ ಕೋರಿದ್ದರು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು  ಜೀವಿತ ಪ್ರಮಾಣಪತ್ರ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಹಾಗೂ ಇತರೆ ಮಾರ್ಗೋಪಾಯಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಂಡರೆ ಯೋಜನೆಯ ದುರುಪಯೋಗ ತಪ್ಪಲಿದೆ
ದಿನೇಶ್ ಗೂಳಿಗೌಡ ಉಪಾಧ್ಯಕ್ಷ ರಾಜ್ಯ ಗ್ಯಾರಂಟಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.