ADVERTISEMENT

ಗೃಹ ಲಕ್ಷ್ಮೀ ಯೋಜನೆ: ಕ್ಷಮೆಯಾಚಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಫಲಾನುಭವಿಗಳ ಖಾತೆ ಸೇರದ ಎರಡು ತಿಂಗಳ ‘ಗೃಹ ಲಕ್ಷ್ಮೀ’ ಹಣ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 15:40 IST
Last Updated 17 ಡಿಸೆಂಬರ್ 2025, 15:40 IST
ಲಕ್ಷ್ಮೀ ಹೆಬ್ಬಾಳಕರ
ಲಕ್ಷ್ಮೀ ಹೆಬ್ಬಾಳಕರ   

ಸುವರ್ಣ ವಿಧಾನಸೌಧ (ಬೆಳಗಾವಿ): ‘ಗೃಹ ಲಕ್ಷ್ಮೀ’ ಯೋಜನೆಯ ಹಣ ಪಾವತಿ ಕುರಿತಂತೆ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ವಿರೋಧ ಪಕ್ಷಗಳು ಹಾಕಿದ ಪಟ್ಟಿಗೆ ಮಣಿದು, ಕ್ಷಮೆ ಕೇಳಿದ ಪ್ರಸಂಗಕ್ಕೆ ವಿಧಾನಸಭೆ ಬುಧವಾರ ಸಾಕ್ಷಿಯಾಯಿತು.

ಸಚಿವೆ ಕ್ಷಮೆ ಯಾಚಿಸಿದರೂ ತೃಪ್ತರಾಗದ ವಿರೋಧ ಪಕ್ಷಗಳ ಸದಸ್ಯರು, ಎರಡು ತಿಂಗಳ ಬಾಕಿಯನ್ನು ಯಾವಾಗ ಪಾವತಿಸಲಾಗುವುದು ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲವೆಂದು ಆರೋಪಿಸಿ ಸಭಾತ್ಯಾಗ ಮಾಡಿದರು. 

ಕಲಾಪ ಆರಂಭವಾಗುತ್ತಿದ್ದಂತೆ ವಿಚಾರ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ, ‘ಮಹೇಶ ಟೆಂಗಿನಕಾಯಿ ಅವರ ಪ್ರಶ್ನೆಗೆ ಗೃಹ ಲಕ್ಷ್ಮೀ ಯೋಜನೆಯ ಕಳೆದ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಕಂತು ಪಾವತಿಸಲಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ತಪ್ಪು ಉತ್ತರ ನೀಡಿದ್ದಾರೆ. ಮೂರು ದಿನದಿಂದ ಅವರು ಸದನಕ್ಕೆ ಬರುತ್ತಿಲ್ಲ. ಇದು ಸದನದ ಗೌರವದ ಪ್ರಶ್ನೆ. ಸಚಿವರ ಕರೆಯಿಸಿ ಸ್ಪಷ್ಟನೆ ಕೊಡಿಸಿ’ ಎಂದು ಆಗ್ರಹಿಸಿದರು.

ADVERTISEMENT

ಅದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ, ‘ಈ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ. ಉದ್ದೇಶಪೂರ್ವಕವಾಗಿ ಅವರು ತಪ್ಪು ಮಾಹಿತಿ ನೀಡಿಲ್ಲ. ಸುಳ್ಳು ಹೇಳುವ ಉದ್ದೇಶವೂ ಅವರಿಗೆ ಇರಲಿಲ್ಲ. ಹಾಗೇನಾದರೂ ಎರಡು ತಿಂಗಳ ಕಂತು ಪಾವತಿ ಆಗಿಲ್ಲವೆಂದಾದರೆ ಪಾವತಿಸುವುದಾಗಿ ಮುಖ್ಯಮಂತ್ರಿ ಕೂಡ ಹೇಳಿದ್ದಾರೆ’ ಎಂದರು.

‘ಸಚಿವರ ಕರೆಯಿಸಿ ಉತ್ತರ ಕೊಡಿಸುತ್ತೇನೆ’ ಎಂದು ಸಭಾಧ್ಯಕ್ಷರು ಹೇಳಿದರೂ, ‘ಇದು 1.26 ಕೋಟಿ ಮಹಿಳೆಯರಿಗೆ ಸಂಬಂಧಿಸಿದ ವಿಚಾರ. ಯಾವ ಕಾರಣಕ್ಕೆ ಎರಡು ತಿಂಗಳು ಹಣ ಪಾವತಿಸಿಲ್ಲ. ಮೋಸ ಮಾಡಲು ಹೀಗೆ ಮಾಡಿದ್ರಾ’ ಎಂದು ಅಶೋಕ ಪ್ರಶ್ನಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗದಲ್ಲಿ ಜಮಾಯಿಸಿ ಸಚಿವೆ ಹಾಗೂ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಆಗ ಕಲಾಪವನ್ನು ಸಭಾಧ್ಯಕ್ಷರು 10 ನಿಮಿಷ ಮುಂದೂಡಿದರು.

ಸುಮಾರು ಒಂದು ಗಂಟೆಯ ಬಳಿಕ ಮತ್ತೆ ಕಲಾಪ ಆರಂಭವಾದಾಗ ಲಕ್ಷ್ಮೀ ಹೆಬ್ಬಾಳಕರ ಕೂಡ ಹಾಜರಾದರು. ವಿರೋಧ ಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗದಲ್ಲಿ ಧರಣಿ ಮುಂದುವರಿಸಿದರು.

‘ಸಚಿವೆ ಸದನಕ್ಕೆ ಬಂದಿದ್ದಾರೆ. ತಮ್ಮ ಆಸನಗಳಲ್ಲಿ ಕುಳಿತುಕೊಂಡರೆ ಅವರು ಉತ್ತರ ಕೊಡುತ್ತಾರೆ’ ಎಂದು ಸಭಾಧ್ಯಕ್ಷರು ಹೇಳಿದಾಗ, ಆರ್‌. ಅಶೋಕ ‘ಎರಡು ತಿಂಗಳ ಬಾಕಿ  ಅಂದರೆ, ಸುಮಾರು ₹ 5 ಸಾವಿರ ಕೋಟಿ ಎಲ್ಲಿಗೆ ಹೋಯಿತು ಎನ್ನುವುದಕ್ಕೆ ಸಚಿವೆ ಉತ್ತರಿಸಬೇಕು. ತಪ್ಪು ಉತ್ತರಕ್ಕೆ ರಾಜ್ಯದ ಜನರ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದರು. ಸಭಾಧ್ಯಕ್ಷರು ಮನವೊಲಿಸಿದ ಬಳಿಕ ವಿರೋಧ ಪಕ್ಷಗಳ ಸದಸ್ಯರು ಧರಣಿ ಕೈಬಿಟ್ಟರು.

ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ, ‘ಪ್ರಶ್ನೆಗೆ ಉತ್ತರ ನೀಡುವಾಗ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಕಂತು ಪಾವತಿಸಲಾಗಿದೆ ಎಂದು ಹೇಳಿದ್ದೇನೆ. ಈ ಎರಡೂ ತಿಂಗಳು ಹಾಕಿಲ್ಲ. ಮಾಹಿತಿ ನೀಡುವಾಗ ಹೆಚ್ಚುಕಮ್ಮಿಯಾಗಿದೆ. ತಪ್ಪು ಮಾಹಿತಿ ನೀಡಿ ಸದನದ ದಾರಿ ತಪ್ಪಿಸುವ ಉದ್ದೇಶ ನನ್ನದಲ್ಲ. ಮುಂದಿನ ದಿನಗಳಲ್ಲಿ ಹಣ ಪಾವತಿಸುತ್ತೇವೆ’ ಎಂದರು.

ಅವರ ಮಾತಿನಿಂದ ತೃಪ್ತರಾಗದ ವಿರೋಧ ಪಕ್ಷದ ಸದಸ್ಯರು, ಸಚಿವರು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದರು. ಆಗ ಲಕ್ಷ್ಮೀ ಹೆಬ್ಬಾಳಕರ, ‘ನನ್ನ ಮಾತುಗಳಿಂದ ಯಾರಿಗಾದರು ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದರು.

ಇದನ್ನು ಆಕ್ಷೇಪಿಸಿದ ಆರ್. ಅಶೋಕ, ‘ತಪ್ಪಾಗಿದೆ ಎಂದು ಸದನದಲ್ಲಿ ಹೇಳಿ, ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು. ಸಚಿವ ಎಚ್.ಕೆ. ಪಾಟೀಲ, ‘ಸಚಿವೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಚರ್ಚೆ ಇಲ್ಲಿಗೇ ಮುಗಿಸಿ’ ಎಂದು ಮನವಿ ಮಾಡಿದರು.

ಬಿಜೆಪಿಯ ವಿ. ಸುನೀಲ್ ಕುಮಾರ್, ‘ಸರ್ಕಾರ ದಿವಾಳಿಯಾಗಿದೆ. ಎರಡು ತಿಂಗಳ ಕಂತು ಬಾಕಿ ಉಳಿಸಿಕೊಳ್ಳಲು ಇದು ಲಾಂಗ್ ಜಂಪ್ ಅಲ್ಲ’ ಎಂದರು.

ಮಧ್ಯಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದರು. ಆಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಈವರೆಗೂ  ಕೊಟ್ಟಿಲ್ಲ. ಅದಕ್ಕೆ, ಕೇಂದ್ರ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಲಾಗುತ್ತದೆಯೇ? ನಮ್ಮ ಗ್ಯಾರಂಟಿ ಯೋಜನೆಗಳನ್ನು ಫಾಲೋ ಮಾಡಿ ನೀವು ಚುನಾವಣೆ ಗೆದ್ದಿದ್ದೀರಿ’ ಎಂದು ತಿರುಗೇಟು ನೀಡಿದರು.

ಚುನಾವಣೆ ವಿಷಯ ಪ್ರಸ್ತಾಪವು ವಿರೋಧ ಪಕ್ಷದ ಸದಸ್ಯರು ಮತ್ತು ಆಡಳಿತ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ದಾರಿ ಮಾಡಿಕೊಟ್ಟಿತು. 

ಆರ್. ಅಶೋಕ, ‘ಸಚಿವೆ ಸದನಕ್ಕೆ ನೀಡಿದ್ದ ತಪ್ಪು ಉತ್ತರವನ್ನು ಕಡತದಿಂದ ತೆಗೆಸಬೇಕು. ಇಲ್ಲವಾದರೆ, ಇಲ್ಲಿ ಎಲ್ಲ ಮಂತ್ರಿಗಳ್ಳು ಸುಳ್ಳು ಹೇಳುತ್ತಾರೆ ಎಂದಾಗುತ್ತದೆ. ಸಚಿವೆ ತಪ್ಪು ಮಾಹಿತಿ ನೀಡಿದ್ದಕ್ಕೆ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು. ದನಿಗೂಡಿಸಿದ ಬಿಜೆಪಿಯ ಸುರೇಶ್ ಕುಮಾರ್, ‘ಸಚಿವೆ ಬೇಷರತ್ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.