ADVERTISEMENT

ಜಿ.ಎಸ್.ಸಿದ್ದಲಿಂಗಯ್ಯ ನುಡಿನಮನ: ಸೀಮದಲೆ ನಿಸ್ಸೀಮ

ನುಡಿನಮನ

ಎಂ.ಎಸ್.ಆಶಾದೇವಿ
Published 7 ಮೇ 2025, 23:31 IST
Last Updated 7 ಮೇ 2025, 23:31 IST
<div class="paragraphs"><p>ಜಿ.ಎಸ್.ಸಿದ್ದಲಿಂಗಯ್ಯ</p></div>

ಜಿ.ಎಸ್.ಸಿದ್ದಲಿಂಗಯ್ಯ

   

ಇದೇ ಜನವರಿ ತಿಂಗಳಲ್ಲಿ ಜಿ.ಎಸ್.ಸಿದ್ದಲಿಂಗಯ್ಯನವರಿಗೆ ಕಲಬುರಗಿಯ ಪಾಳಾ ಸುಭಾಶ್ಚಂದ್ರ ಪಾಟೀಲ ಟ್ರಸ್ಟ್‌ನವರು ‘ಬಸವ ಪ್ರಶಸ್ತಿ’ ನೀಡಿ ಗೌರವಿಸಿದ್ದರು. ಇನ್ನೂ ಹಲವು ಉನ್ನತ ಪ್ರಶಸ್ತಿಗಳು ಇವರಿಗೆ ಸಾಧಾರವಾಗಿ ಸಲ್ಲಬೇಕಿದ್ದವು. ಪ್ರಶಸ್ತಿಗಳನ್ನು ಕುರಿತ ಮೋಹದಿಂದ ಈ ಮಾತುಗಳನ್ನು ಹೇಳುತ್ತಿಲ್ಲ. ಇವರಿಗೆ ಆ ಪ್ರಶಸ್ತಿಗಳನ್ನು ನೀಡಿದ್ದರೆ, ಆ ಪ್ರಶಸ್ತಿಗಳಿಗೇ ಮರ್ಯಾದೆ ಬರುತ್ತಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ ಎನ್ನುವ ನೋವು, ವಿಷಾದ ಮತ್ತು ಅಂತಹ ಕೆಲವು ಆಯ್ಕೆ ಸಮಿತಿಗಳಲ್ಲಿ ಸೋತ ವಿಷಾದದಿಂದ ಈ ಮಾತು ಹೇಳುತ್ತಿದ್ದೇನೆ.

ಅಂದು ಮೇಷ್ಟ್ರು ತಿಂಡಿಯನ್ನು ಸವಿಯುತ್ತಲೇ ಸಾಹಿತ್ಯದ ಬಗ್ಗೆ ಸವಿಯಾಗಿಯೂ, ಗಂಭೀರವಾಗಿಯೂ ಮಾತನಾಡುತ್ತಿದ್ದರು. ತಿಂಡಿ ಬೇಡ ಎಂದವರ ಬಗ್ಗೆ ಮರುಕದ ದೃಷ್ಟಿಯನ್ನು ಬೀರಿದ್ದರು. ನಾನು ಮಾಡಿದ ಅಭಿನಂದನಾ ಭಾಷಣವನ್ನು ಮೆಚ್ಚಿ ಅವರ ವ್ಯಕ್ತಿತ್ವಕ್ಕೆ ಅಪರೂಪ ಎನ್ನುವಂತೆ, ‘ಇದನ್ನು ಬರೆದು ಕೊಡಮ್ಮ’ ಎಂದಿದ್ದರು. ನನ್ನ ಸೋಮಾರಿತನದಲ್ಲಿ ಅದನ್ನು ಬರೆದು ಅವರಿಗೆ ತಲುಪಿಸಲಾಗಲಿಲ್ಲ ಎನ್ನುವ ನೋವು ಕೊನೆಯವರೆಗೂ ಉಳಿಯುತ್ತದೆ. 94ರ ಇಳಿ ವಯಸ್ಸಿನಲ್ಲಿ ಕೈಯ್ಯಲ್ಲೊಂದು ಪುಸ್ತಕ, ಹಾಳೆ ಏನೂ ಇಲ್ಲದೆ ಅಸಹಾಯಶೂರರಂತೆ ಸುಮಾರು ಅರ್ಧ ಗಂಟೆ ವಚನ ಚಳವಳಿ ಮತ್ತು ಸಾಹಿತ್ಯ ಕುರಿತಂತೆ ಅದೆಷ್ಟು ತನ್ಮಯರಾಗಿ ಅವರು ಮಾತನಾಡಿದ್ದರು!

ADVERTISEMENT

ಜಿ.ಎಸ್.ಸಿದ್ದಲಿಂಗಯ್ಯನವರು ಪಂಡಿತ ಪರಂಪರೆಯ ಶಿಖರವಾಗಿದ್ದರು. ಕನ್ನಡದ ಅತ್ಯುತ್ತಮ ಕವಿಗಳಾಗಿದ್ದರು. ಅಧ್ಯಾಪನಕ್ಕೂ, ಬರಹಗಾರರಿಗೂ, ಆಡಳಿತಕ್ಕೂ ಆಗಿ ಬರುವುದಿಲ್ಲ ಎನ್ನುವ ಮಿಥ್ ಅನ್ನು ಒಡೆದು, ಆಡಳಿತಕ್ಕೇ ಒಂದು ಮಾದರಿಯನ್ನು ಕಟ್ಟಿಕೊಟ್ಟರು. ವಚನ ಚಳವಳಿ ಮತ್ತು ಸಾಹಿತ್ಯ ಅವರ ಮೊದಲ ಪ್ರೀತಿಯಾಗಿದ್ದರೂ ಕನ್ನಡ ಸಾಹಿತ್ಯ ಪರಂಪರೆಯನ್ನೂ ಅಷ್ಟೇ ಪ್ರೀತಿಯಿಂದ, ಹೆಮ್ಮೆಯಿಂದ ನೋಡುತ್ತಿದ್ದರು. ಅವರ ಉಪನ್ಯಾಸಗಳೆಂದರೆ ಪಂಡಿತನ ಸಮೃದ್ಧ ಓದು, ವಿಮರ್ಶಕರ ವಸ್ತುನಿಷ್ಠತೆ ಮತ್ತು ಕವಿಯ ಅಂತಃಕರಣ ಎಲ್ಲವೂ ಬೆರತು, ಕೇಳುವುದೇ ಒಂದು ಅನುಭವವಾಗುತ್ತಿತ್ತು. ಅವರ ನೇರ ವಿದ್ಯಾರ್ಥಿಗಳು ಅವರನ್ನು ಆದರ್ಶ ಎಂದು ನೋಡುವುದು ತೀರಾ ಸಹಜ.

ನವೋದಯದ ಪಂಡಿತ ಪರಂಪರೆಯವರು ಎಂದು ಇವರನ್ನು ನೋಡುವುದು ಇವರ ಮುಕ್ತ ನಿಲುವುಗಳಿಗೆ ಬೇಲಿ ಹಾಕಿದಂತೆ. ಸತತ ಓದು ಇವರ ಬರವಣಿಗೆಗಳಿಗೆ ದೊಡ್ಡ ಹರಹನ್ನು ಕೊಟ್ಟಂತೆಯೇ, ಸಾಹಿತ್ಯ ಪರಂಪರೆಯನ್ನು ನಿತ್ಯಶೋಧಕ್ಕೆ ಒಡ್ಡದೆ ಬೇರೆ ದಾರಿ ಇಲ್ಲ ಎನ್ನುವ ಸತ್ಯದ ಎದುರಿಗೆ ನಿಲ್ಲಿಸಿತು.

ಚಾಮರಸ, ರತ್ನಾಕರವರ್ಣಿಯಂತಹ ಕವಿಗಳನ್ನಾಗಲೀ, ಬೇಂದ್ರೆ, ಕುವೆಂಪು ಅವರನ್ನಾಗಲೀ ಜಿಎಸ್ಎಸ್ ಸ್ಥಾಪಿತವಾದ ಚೌಕಟ್ಟುಗಳ ಆಚೆಗೇ ನೋಡಲು ಹವಣಿಸಿದರು. ಗೂಳೂರು ಸಿದ್ಧವೀರಣ್ಣನನ್ನು ಕುರಿತು ಬರೆಯುವಷ್ಟೇ ಉತ್ಕಟತೆಯಿಂದ ನವ್ಯಕಾವ್ಯದ ಬಗೆಗೂ ಇವರು ಬರೆಯಬಲ್ಲವರಾಗಿದ್ದರು. ಇವರ ಕೆಲವು ಕೃತಿಗಳ ಶೀರ್ಷಿಕೆಗಳೇ ಹೊಸತನವನ್ನು ಕುರಿತ ಇವರ ನಿಸ್ಸಂಕೋಚದ, ನಿರ್ಭಿಡೆಯ ನಿಲುವುಗಳನ್ನು ಸೂಚಿಸುತ್ತವೆ.

 ಭಾಷೆ ಗೀಷೆ - ಬೇಂದ್ರೆ, ಕುವೆಂಪು, ಲಯವೂ ಅದರ ಪರಿವಾರವೂ, ಚಿತ್ರ ವಿಚಿತ್ರ, ಮಣ್ಣಿಗಿಳಿದ ಆಕಾಶ, ನನ್ನದೆನ್ನಬಹುದೆ.... ಇವರ ಸಮಗ್ರ ಕಾವ್ಯಕ್ಕೆ ಇವರೇ ಆರಿಸಿದ ಶೀರ್ಷಿಕೆ ‘ಅಸಮಗ್ರ’. ತಮ್ಮ ಕಾವ್ಯದ ಅಸಮಗ್ರತೆಯನ್ನು, ಒಟ್ಟೂ ಕಾವ್ಯದ ಅಸಮಗ್ರತೆಯನ್ನು, ಸಮಗ್ರ ಎಂದು ಕರೆಯುವುದರ ಅಸಂಗತತೆಯನ್ನು... ಎಷ್ಟೊಂದನ್ನು ಈ ಶೀರ್ಷಿಕೆ ಧ್ವನಿಸುತ್ತಿದೆ!

ಅನುವಾದಗಳು, ಸಂಪಾದನೆಗಳು, ದೊಡ್ಡ ಪ್ರಮಾಣದ, ಗುಣಮಟ್ಟದ ವಿಮರ್ಶೆ, ಕೊನೆಯವರೆಗೂ ಇವರು ನೆಚ್ಚಿದ ಕಾವ್ಯ ಈ ಎಲ್ಲವೂ ಜಿಎಸ್ಎಸ್ ಅವರಿಗೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಎತ್ತರದ ಸ್ಥಾನವನ್ನು ಸಂಪಾದಿಸಿಕೊಟ್ಟಿವೆ. ‘ಮಿಥಿಲೆಗಿಲ್ಲಿಂದಲೇ ಮಾರ್ಗವೇನು ಗುರು?’ ಕವಿತೆಯು ಜಿಎಸ್ಎಸ್ ಅವರ ಪ್ರಾತಿನಿಧಿಕ ಕವಿತೆ. ಭವ, ಭಾವ ಮತ್ತು ಅನುಭಾವಗಳ ನಡುವೆ ಜೀಕುವ ಮನುಷ್ಯಾವಸ್ಥೆಯನ್ನು, ಬಿಡಿಸಬರದ ಅವುಗಳ ನಡುವಿನ ಅನುಬಂಧವನ್ನು ಈ ಕವಿತೆ ಹಲವು ಮಗ್ಗುಲುಗಳಿಂದ ಧ್ಯಾನಿಸುತ್ತದೆ.

ಇವರ ಕಾವ್ಯವಾದರೂ ಸಾಮಾಜಿಕ ವಾಸ್ತವಗಳು, ವೈಯಕ್ತಿಕವಾದ ಅನುಭವಗಳು, ರಾಜಕೀಯ ಸಂದರ್ಭಗಳು ಈ ಎಲ್ಲವನ್ನೂ ಒಳಗೊಳ್ಳುತ್ತಲೇ ಹೋಗಿವೆ. ಅಮ್ಮ, ಗಾಂಧಿ, ನೆಹರೂ, ಪುರಾಣಗಳು, ಚರಿತ್ರೆಯ ಜೊತೆಗಿನ ಮುಖಾಮುಖಿ, ಪ್ರಕೃತಿ ...ಇವು ಸಿದ್ದಲಿಂಗಯ್ಯನವರಲ್ಲಿ ಆವರ್ತನಗೊಳ್ಳುವ ಧಾತುಗಳು.

ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಇವರು ಕೈಗೊಂಡ ತೀರ್ಮಾನಗಳು ಎಲ್ಲ ಕಾಲಕ್ಕೂ ಅಧಿಕಾರಸ್ಥರು ಪಾಲಿಸಬೇಕಾದ ಸಂಗತಿಗಳಾಗಿವೆ. ಬಡ್ತಿ ನೀಡಬೇಕಾದ ಸಂದರ್ಭವೊಂದರಲ್ಲಿ ಒಬ್ಬರಿಗೆ, ಅವರು ಆ ತಿಂಗಳ ಕೊನೆಗೆ ನಿವೃತ್ತರಾಗುವವರಿದ್ದರು. ಅದಾಗಲೇ ತಿಂಗಳ ಕೊನೆಯ ವಾರ. ‘ಅಯ್ಯೋ ಅವರಿಗೆ ಸಿಗುವುದಿಲ್ಲ’ ಎಂದು ಅವರ ಸ್ನೇಹಿತರು ಹೇಳಿದ ಕೂಡಲೇ ಅವರನ್ನು ಕರೆಸಿ, ಎರಡು ದಿನಗಳಲ್ಲಿಯೇ ಅವರಿಗೆ ಬಡ್ತಿಯ ಆದೇಶ ನೀಡಿದರು.

ಮತ್ತೊಬ್ಬರು ‘ನನ್ನ ಪ್ರಮೋಷನ್ ಫೈಲ್ ಬಂದಿರಬೇಕು, ವಿಚಾರಿಸಲು ಬಂದೆ’ ಎಂದರೆ, ಇವರು ‘ನೋಡಿ... ಇಲ್ಲೇ ಇದೆ ಫೈಲು’ ಎಂದು ತೋರಿಸಿದರು; ಮಾತ್ರವಲ್ಲ ಸಿಬ್ಬಂದಿಯನ್ನು ಕರೆದು, ‘ಇವರು ಬಂದಿದ್ದಾರೆ. ಆದೇಶ ತೆಗೆದುಕೊಂಡೇ ಹೋಗಲಿ. ಆದೇಶ ಸಿದ್ಧಮಾಡಿ’ ಎಂದರು. ಆ ಮಹಾನುಭಾವರು, ‘ಸರ್ ಇವತ್ತು ಮಂಗಳವಾರ’ ಎಂದರೆ, ‘ಇಂದಿನ ದಿನವೇ ಶುಭದಿನವಯ್ಯ’ ಎನ್ನುವ ವಚನ ಉದ್ಧರಿಸಿ, ‘ನೀವು ಬೇಕಾದರೆ ನಾಳೆ ಬಂದು ತೆಗೆದುಕೊಂಡು ಹೋಗಿ’ ಎಂದರು. ಆತ, ಕೇಳದೆಯೇ, ಬೇಡದೆಯೇ ಬಡ್ತಿ ನೀಡುವ ನಿರ್ದೇಶಕರು ನಮ್ಮ ಇಲಾಖೆಗೆ ಬಂದಿದ್ದಾರೆ ಎಂದು ಆಶ್ಚರ್ಯಪಟ್ಟರಂತೆ.

ಇದೇ ಇಲಾಖೆಯಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಕೊಡದಿದ್ದ ಬಡ್ತಿ ಪಡೆಯಲು ನಾವು ಮೂರು ವರ್ಷ ತಿರುಗಬೇಕಾಯಿತು. ಇವರ ಜಾಗದಲ್ಲಿಯೇ ನಿರ್ದೇಶಕರಾಗಿದ್ದ ಅಧ್ಯಾಪಕ ಮಹನೀಯರೊಬ್ಬರು, ಅವರಿಗೆ ಪಿಎಚ್‌.ಡಿ ಇರಲಿಲ್ಲ ಎನ್ನುವ ಕಾರಣಕ್ಕೆ ನಾನು ನಿರ್ದೇಶಕನಾಗಿರುವ ತನಕ ಇವರಿಗೆ ಪ್ರಾಧ್ಯಾಪಕರಾಗಿ ಬಡ್ತಿ ಸಿಗದೆ ಇರುವ ಹಾಗೆ ಮಾಡುತ್ತೇನೆ ಎಂದು ಪಣ ತೊಟ್ಟರು. ಮಾತ್ರವಲ್ಲ ಅದನ್ನು ಉಳಿಸಿಕೊಂಡರು ಕೂಡ. ಇಂಥವರ ಎದುರಿಗೆ ಸಿದ್ದಲಿಂಗಯ್ಯನವರು ಇನ್ನೂ ಎತ್ತರದಲ್ಲಿ ನಿಲ್ಲುತ್ತಾರೆ.

ತುಂಬು ಮೊಗದಲ್ಲಿ ಒಂದಿಷ್ಟೇ ನಗೆ, ಕೊಂಕಲ್ಲ ಬಿಂಕವಿಲ್ಲದ ನೇರ ನಿಷ್ಠುರ ಮಾತು; ಕಷ್ಟವೆನಬೇಡ, ಎಂತಿದ್ದರೂ ಸ್ನೇಹ ಸ್ವಾದಿಷ್ಟ

–ಚೆನ್ನವೀರ ಕಣವಿ


ಎಲೆ ಆಪ್ತ ಜೀವವೇ, ಈಗ ನೋಡಿಲ್ಲಿ ಈ ಒಂದು ಕ್ಷಣದಲ್ಲಿ

ಭವದ ಕ್ಷಣಿಕತೆ ಅರಿತ ಈ ಜೀವ

ನಿನ್ನಂಥ ಪರಿಪಕ್ವ ಜೀವಕ್ಕೆ ಉದ್ದಂಡ ನಮಸ್ಕಾರ ಮಾಡುತ್ತೆ‌

ದಾರಿಯುದ್ದಕ್ಕೂ ಶುಭವ ಕೋರುತ್ತೆ

ಸುಮತೀಂದ್ರ ನಾಡಿಗ


ಜಿ.ಎಸ್.ಸಿದ್ದಲಿಂಗಯ್ಯನವರನ್ನು ಕುರಿತ ಅಭಿನಂದನಾ ಗ್ರಂಥದ ಹೆಸರು ‘ನಿಸ್ಸೀಮ’

ಮಧುರಚೆನ್ನರ ಕಾವ್ಯದ ಸಾಲೊಂದು ನೆನಪಾಗುತ್ತಿದೆ.

ನಿಸ್ಸೀಮ ನಿಸ್ಸೀಮ

ಸೀಮದಲೆ ನಿಸ್ಸೀಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.