ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಪಿಟಿಐ ಚಿತ್ರ
ನವದೆಹಲಿ: ಕರ್ನಾಟಕದಲ್ಲಿ 2024-25ನೇ ಆರ್ಥಿಕ ವರ್ಷದಲ್ಲಿ 1,254 ಪ್ರಕರಣಗಳಲ್ಲಿ ₹39577 ಕೋಟಿ ಮೊತ್ತದ ಜಿಎಸ್‌ಟಿ ವಂಚನೆ ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಲೋಕಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸಂಸದರಾದ ಡಾ.ಕೆ. ಸುಧಾಕರ್ ಹಾಗೂ ತೇಜಸ್ವಿ ಸೂರ್ಯ ಪ್ರಶ್ನೆಗೆ ಉತ್ತರಿಸಿದ ಅವರು, ʼಈ ಪ್ರಕರಣಗಳಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿದ ಬಳಿಕ ₹1623 ಕೋಟಿ ಮೊತ್ತವನ್ನು ಸ್ವಯಂಪ್ರೇರಿತವಾಗಿ ಪಾವತಿ ಆಗಿದೆʼ ಎಂದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಎಸ್‌ಟಿ ವಂಚನೆ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ.
ಯುಪಿಐ ವಹಿವಾಟುಗಳ ಆಧಾರದಲ್ಲಿ ಕರ್ನಾಟಕ ಸೇರಿದಂತೆ ದೇಶದ ಸಣ್ಣ ವರ್ತಕರು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಯಾವುದೇ ನೋಟಿಸ್ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದ್ದ ಬೇಕರಿ, ಹೋಟೆಲ್, ಬೀಡಾ ಅಂಗಡಿ ಮತ್ತು ಟೀ ಅಂಗಡಿ ಮಾಲೀಕರಿಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ನೋಂದಣಿ ಮಾಡಿಸಿ ಮತ್ತು ಜಿಎಸ್‌ಟಿ ಪಾವತಿಸಿ ಎಂದು ಸೂಚಿಸಿದ್ದರು. ಈ ಕ್ರಮಕ್ಕೆ ಆಕ್ಷೇಪ ಎದುರಾಗಿತ್ತು. ನೋಟಿಸ್ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ವರ್ತಕರು ಪ್ರತಿಭಟನೆ ನಡೆಸಿದ್ದರು. ಜಿಎಸ್‌ಟಿ ಕೇಂದ್ರದ್ದು ಎಂದು ಕಾಂಗ್ರೆಸ್ ದೂರಿದ್ದರೆ, ಕರ್ನಾಟಕದಲ್ಲಿ ಮಾತ್ರ ಈ ರೀತಿ ವಸೂಲು ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆಪಾದಿಸಿದ್ದರು. ಇದು ರಾಜಕೀಯ ವಾಗ್ವಾದಕ್ಕೂ ಕಾರಣವಾಗಿತ್ತು.
ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದ 9,000 ಸಣ್ಣ ವರ್ತಕರು ಇಲ್ಲಿಯವರೆಗೂ ಪಾವತಿಸಬೇಕಿದ್ದ ಜಿಎಸ್‌ಟಿ ಮನ್ನಾ ಮಾಡಲು ಸಮ್ಮತಿಸಿದ್ದರು.
ಸರಕುಗಳ ವಾರ್ಷಿಕ ವಹಿವಾಟು ಮಿತಿಯನ್ನು ₹40 ಲಕ್ಷಕ್ಕೆ ಹಾಗೂ ಸೇವಾ ವಹಿವಾಟು ಮಿತಿಯನ್ನು ₹20 ಲಕ್ಷಕ್ಕೆ ಸರ್ಕಾರ ನಿಗದಿಪಡಿಸಿದೆ. ಈ ಮಿತಿ ದಾಟಿದವರು ಜಿಎಸ್‌ಟಿ ನೋಂದಣಿ ಮಾಡಿಸುವುದು ಹಾಗೂ ನಿಯಮದಂತೆ ತೆರಿಗೆ ಪಾವತಿಸುವುದು ಕಡ್ಡಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.