ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ)ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ವರಮಾನವೂ ವಿಳಂಬವಾಗುವ ಸಾಧ್ಯತೆ ಇದ್ದು, ತೀವ್ರ ಆರ್ಥಿಕ ಸಂಕಷ್ಟ ಎದುರಾಗುವ ಆತಂಕ ನೆಲೆಸಿದೆ.
2017ರ ಜುಲೈನಲ್ಲಿ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದಲೂ ಪ್ರತಿ ತಿಂಗಳೂ ಜಿಎಸ್‌ಟಿ ಪರಿಹಾರವನ್ನು ರಾಜ್ಯಕ್ಕೆ ಸಂದಾಯ ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ವರಮಾನವನ್ನು ಕೇಂದ್ರ ತಡೆಹಿಡಿದಿದೆ. ಇದೀಗ ಮತ್ತೆ ಎರಡು ತಿಂಗಳ ವರಮಾನವೂ ವಿಳಂಬವಾಗುವ ಲಕ್ಷಣ ಕಾಣಿಸಿದೆ.
ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಿದ್ದರಿಂದ ಹಾಗೂ ಶತಮಾನದಲ್ಲೇ ಕಂಡರಿಯದ ನೆರೆ ಹಾವಳಿಯಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಜಿಎಸ್‌ಟಿ ಪರಿಹಾರ ರೂಪದಲ್ಲಿ ಬರಬೇಕಾಗಿದ್ದ ₹ 2,800 ಕೋಟಿಯೂ ಬಂದಿಲ್ಲ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಜಿಎಸ್‌ಟಿ ಪರಿಹಾರ ಡಿಸೆಂಬರ್ 10ರೊಳಗೆ ಬರ
ಬೇಕಿದ್ದು, ಅದೂ ವಿಳಂಬವಾಗುವ ಸಾಧ್ಯತೆ ಇದೆ. ಈ ವಿದ್ಯಮಾನ ಹಣಕಾಸು ಇಲಾಖೆಯ ಅಧಿಕಾರಿಗಳನ್ನು ಚಿಂತೆಗೆ ಹಚ್ಚಿದೆ.
ನಾಲ್ಕು ತಿಂಗಳು ಸೇರಿ ಒಟ್ಟು ₹ 5,600 ಕೋಟಿಯಷ್ಟು ಜಿಎಸ್‌ಟಿ ಪರಿಹಾರ ರಾಜ್ಯಕ್ಕೆ ಸಿಗಬೇಕಾಗಿದ್ದು, ವಿಳಂಬವಾದರೆ ಸರ್ಕಾರದ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ತೊಡಕು ಉಂಟಾಗುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.