ADVERTISEMENT

‘ಜಿಎಸ್‌ಟಿ ಪರಿಹಾರ ನೀಡಿಕೆ ಅನಿಶ್ಚಿತ’- ಪರಿಣಾಮ ಬೀರದು: ಅಧಿಕಾರಿಗಳ ಅಭಿಮತ

ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರದು: ಅಧಿಕಾರಿಗಳ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 1:23 IST
Last Updated 1 ಜುಲೈ 2022, 1:23 IST
   

ಬೆಂಗಳೂರು: ರಾಜ್ಯಗಳಿಗೆ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ‘ಪರಿಹಾರ’ ಯೋಜನೆ ಮುಂದುವರಿಸುವ ಬಗ್ಗೆ ಜಿಎಸ್‌ಟಿ ಮಂಡಳಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ವೇಳೆ ಪರಿಹಾರ ಯೋಜನೆಯನ್ನು ನಿಲ್ಲಿಸಿದರೂ ಅದರಿಂದ ಮುಂಬರುವ ವರ್ಷಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

2022–23ನೇ ಸಾಲಿನ ಬಜೆಟ್‌ನಲ್ಲಿ ಜಿಎಸ್‌ಟಿ ಪರಿಹಾರ ₹5,000 ಕೋಟಿ ಎಂದು ಲೆಕ್ಕ ಹಾಕಲಾಗಿತ್ತು. ಈ ಹಿಂದಿನ ಸಾಲುಗಳಲ್ಲಿ ಅಂದರೆ 2021–22 ರಲ್ಲಿ ₹12,708 ಕೋಟಿ ಮತ್ತು 2020–21ರಲ್ಲಿ ₹13,789 ಕೋಟಿ ಪರಿಹಾರವೆಂದು ಬಜೆಟ್‌ನಲ್ಲಿ ಅಂದಾಜು ಮಾಡಲಾಗಿತ್ತು.

ಪರಿಹಾರ ಮೊತ್ತ ನೀಡುವುದನ್ನು ನಿಲ್ಲಿಸುವುದರಿಂದ ಆಗುವಕೊರತೆ ಸರಿದೂಗಿಸಲು ಇತರ ಮೂಲಗಳಿಂದ ಆದಾಯವನ್ನು ಹೆಚ್ಚಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಪೂರ್ವ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ವಿಶೇಷವಾಗಿ ವಾಣಿಜ್ಯ ತೆರಿಗೆ ಮತ್ತು ಅಬಕಾರಿ ಬಾಬ್ತಿನಲ್ಲಿ ಸರಿದೂಗಿಸಲು ಹೆಚ್ಚಿನ ಗುರಿ ನಿಗದಿ ಮಾಡಲಾಗಿದೆ ಎಂದು ಹಣಕಾಸು ಇಲಾಖೆ ಮೂಲಗಳು ಹೇಳಿವೆ.

ADVERTISEMENT

2017ರ ಜುಲೈ 1 ರಂದು ರಾಜ್ಯಗಳಿಗೆ ಐದು ವರ್ಷಗಳ ಅವಧಿಗೆ ಜಿಎಸ್‌ಟಿ ಪರಿಹಾರ ನೀಡುವುದಾಗಿ ಕೇಂದ್ರ ಭರವಸೆ ನೀಡಿತ್ತು. ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ ಬಳಿಕ ರಾಜ್ಯಗಳಿಗೆ ಆಗುವ ನಷ್ಟವನ್ನು ಭರಿಸಲು ಈ ಯೋಜನೆ ಜಾರಿ ಮಾಡಲಾಗಿತ್ತು.

ಆಗಸ್ಟ್‌ನಲ್ಲಿ ನಿರ್ಧಾರ: ಜಿಎಸ್‌ಟಿ ಪರಿಹಾರವನ್ನು ಮುಂದುವರಿಸಬೇಕು ಎಂದು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಬಹುತೇಕ ಎಲ್ಲ ರಾಜ್ಯಗಳು ಒತ್ತಡ ಹೇರಿವೆ. ಈ ಬಗ್ಗೆ ಆಗಸ್ಟ್‌ನಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ರಾಜ್ಯಕ್ಕೆ ವರ್ಷಕ್ಕೆ ₹20 ಸಾವಿರ ಕೋಟಿ ನಷ್ಟ
ನವದೆಹಲಿ
: ‘ರಾಜ್ಯಗಳಿಗೆ ನೀಡುವ ಜಿಎಸ್‌ಟಿ ಪರಿಹಾರವನ್ನು ಕನಿಷ್ಠ ಐದು ವರ್ಷ ವಿಸ್ತರಿಸಬೇಕು. ಇಲ್ಲದಿದ್ದರೆ ಕರ್ನಾಟಕ ರಾಜ್ಯಕ್ಕೆ ವರ್ಷಕ್ಕೆ ₹20 ಸಾವಿರ ಕೋಟಿ ನಷ್ಟ ಆಗಲಿದೆ’ ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಎಸ್‌ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ಶೇ 14ರಷ್ಟು ನಷ್ಟ ಪರಿಹಾರ ನೀಡುವ ವ್ಯವಸ್ಥೆ 2017ರ ಜುಲೈನಲ್ಲಿ ಆರಂಭವಾಯಿತು. ಈ ವ್ಯವಸ್ಥೆ ಗುರುವಾರ ಕೊನೆಗೊಂಡಿದೆ. ಈ ವ್ಯವಸ್ಥೆ ಮುಂದುವರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಎಸ್‌ಟಿ ಸಭೆಯಲ್ಲಿ ಒತ್ತಡ ಹೇರಿಲ್ಲ. ಇದು ರಾಜ್ಯಕ್ಕೆ ಬೊಮ್ಮಾಯಿ ಮಾಡಿರುವ ಅನ್ಯಾಯ’ ಎಂದು ಟೀಕಿಸಿದರು.

‘ಜಿಎಸ್‌ಟಿ ಜಾರಿಯ ಮೊದಲು ಶೇ 14 ಇದ್ದ ತೆರಿಗೆ ಬೆಳವಣಿಗೆ ದರ ಈಗ ಶೇ 6ಕ್ಕೆ ಇಳಿದಿದೆ. ಇದಕ್ಕೆ ಕೋವಿಡ್‌ ನೆಪ ಹೇಳುತ್ತಿದ್ದಾರೆ.ರಾಜ್ಯಗಳಿಗೆ ತೆರಿಗೆ ಸಂಗ್ರಹ ಕಡಿಮೆ ಆಗಿರುವುದರಿಂದ ಈ ನಷ್ಟ ತುಂಬಿಕೊಡಬೇಕಾದವರು ಯಾರು? ಕೇಂದ್ರ ಸರ್ಕಾರ ಅಲ್ಲವೇ?’ ಎಂದು ಅವರು ಪ್ರಶ್ನಿಸಿದರು.

’ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಭಾರಿ ಹೆಚ್ಚಳ ಮಾಡಲಾಗಿದೆ.ರೈತರು ಹಾಗೂ ಜನಸಾಮಾನ್ಯರು ಹೊಲ ಗದ್ದೆಗಳಲ್ಲಿ ಬಳಸುವ ಸಬ್‌ಮರ್ಸಿಬಲ್‌ ಪಂಪ್‌ಗಳ ಮೇಲೆ ಶೇ 12 ಇದ್ದ ತೆರಿಗೆಯನ್ನು ಶೇ 15ಕ್ಕೆ ಏರಿಸಿದ್ದಾರೆ. ಹಣ್ಣು, ತರಕಾರಿ ಮತ್ತು ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ, ಗ್ರೇಡಿಂಗ್‌ ಹಾಗೂ ಹಾಲು ಕರೆಯುವ ಯಂತ್ರಗಳ ಮೇಲೆ ಇದ್ದ ತೆರಿಗೆಯನ್ನು ಶೇ 12ರಿಂದ 18ಕ್ಕೆ ಏರಿಸಿದ್ದಾರೆ. ಬರೆಯುವ ಮತ್ತು ಮುದ್ರಿಸುವ ಇಂಕ್‌ಗಳ ಮೇಲಿನ ತೆರಿಗೆಯನ್ನು ಶೇ 12ರಿಂದ 18ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಪತ್ರಿಕೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಈ ರೀತಿ ಅವೈಜ್ಞಾನಿಕವಾಗಿ ಯಾರಾದರೂ ಬೆಲೆ ಏರಿಕೆ ಮಾಡುತ್ತಾರಾ. ಇದು ನರೇಂದ್ರ ಮೋದಿ ಸರ್ಕಾರ ಮಾಡಿರುವ ಘೋರ ಅಪರಾಧ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.