ADVERTISEMENT

ಕಾಯ್ದೆಗೆ ತಿದ್ದುಪಡಿ: ಜಿಎಸ್‌ಟಿ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 15:37 IST
Last Updated 14 ಆಗಸ್ಟ್ 2025, 15:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೋರಿಕೆ ವ್ಯಾಪಕವಾಗಿದ್ದು, ಅದನ್ನು ತಡೆಗಟ್ಟಲು ಕೆಲವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.

ಇದಕ್ಕೆ ಪೂರಕವಾಗಿ ‘ಕರ್ನಾಟಕ ಸರಕು ಸೇವೆಗಳ ತಿದ್ದುಪಡಿ ಮಸೂದೆ- 2025’ ಕ್ಕೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಸೂದೆಯನ್ನು ಮಂಡಿಸಿದರು.

ADVERTISEMENT

‘ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌’ ಅನ್ನು ಕೆಲವರು ಅಕ್ರಮವಾಗಿ ಪಡೆದುಕೊಳ್ಳುತ್ತಿದ್ದಾರೆ. ತಂಬಾಕು–ಅಡಿಕೆ ಆಧಾರಿತ ಪದಾರ್ಥಗಳಲ್ಲಿ (ಗುಟ್ಕಾ, ಪಾನ್‌ ಮಸಾಲಾ) ತೆರಿಗೆ ಸೋರಿಕೆ ಆಗುತ್ತಿದೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

‘ಆದಾಯ ತೆರಿಗೆ ರೀಫಂಡ್‌ ಹಗರಣಗಳು ದೊಡ್ಡ ಪ್ರಮಾಣದಲ್ಲಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ಅವುಗಳನ್ನು ವ್ಯವಸ್ಥೆಯ ಮೂಲಕವೇ ತಡೆಗಟ್ಟುವ ಪ್ರಯತ್ನ ಮಾಡಬೇಕು. ಒಬ್ಬೊಬ್ಬರನ್ನೇ ಹುಡುಕಿಕೊಂಡು ಹೋದರೆ ಅವರನ್ನು ಹಿಡಿಯವುದು ಕಷ್ಟ. ಆದ್ದರಿಂದ, ಅವರು ಯಾವ ರೀತಿ ದುರುಪಯೋಗ ಮಾಡುತ್ತಿದ್ದಾರೆ ಎಂಬುದನ್ನು ಹುಡುಕಿ ಅದನ್ನು ತಡೆಗಟ್ಟಲು ಈ ಮಸೂದೆ ತರಲಾಗಿದೆ’ ಎಂದರು.

ಪಾನ್‌ ಮಸಾಲ, ಗುಟ್ಕಾಕ್ಕಾಗಿ ಪೂರೈಕೆ ಆಗುತ್ತಿರುವ ಅಡಿಕೆ ಪ್ರಮಾಣಕ್ಕೂ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿರುವ ಪಾನ್‌ ಮಸಾಲ, ಗುಟ್ಕಾ ಪ್ರಮಾಣಕ್ಕೂ ಸಂಬಂಧವಿಲ್ಲ; ಅಜಗಜಾಂತರವಿದೆ. ತೆರಿಗೆ ವಂಚಿಸಿ ಅಡಿಕೆಯನ್ನು ಉತ್ತರಪ್ರದೇಶಕ್ಕೆ ತಲುಪಿಸುವ ವ್ಯವಸ್ಥಿತ ಜಾಲವೇ ಇದೆ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.