ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನತೆಗೆ ದೀಪಾವಳಿ ಉಡುಗೊರೆ ನೀಡಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ತೆರಿಗೆ ಪರಿಷ್ಕರಣೆಯು ಜನ ಜೀವನ ಸುಧಾರಣೆ ಮತ್ತು ಆತ್ಮನಿರ್ಭರ ಭಾರತವನ್ನು ಬಲಪಡಿಸುವ ಪರಿವರ್ತನಾತ್ಮಕ ಹೆಜ್ಜೆಯಾಗಿದೆ’ ಎಂದು ಹೇಳಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಯನ್ನು ಅನುಮೋದಿಸಿದೆ. ಹೊಸ ಸುಧಾರಣೆಯೊಂದಿಗೆ ಜಿಎಸ್‌ಟಿ ಈಗ ಕೇವಲ ಎರಡು ಸ್ಲ್ಯಾಬ್‌ಗಳನ್ನು(ಶೇ 5 ಮತ್ತು ಶೇ 18) ಹೊಂದಿದೆ’ ಎಂದು ತಿಳಿಸಿದ್ದಾರೆ.
‘ಇದರಿಂದ ದೈನಂದಿನ ಜೀವನದ ಅಗತ್ಯ ವಸ್ತುಗಳು, ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಮತ್ತು ವಾಹನಗಳು ಸುಲಭವಾಗಿ ಕೈಗೆಟುಕುವಂತಾಗಿದೆ. ಜತೆಗೆ, ಉದ್ಯಮಗಳು ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಭಾರಿ ಉತ್ತೇಜನವನ್ನು ಪಡೆಯುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ವ್ಯವಸ್ಥೆಯನ್ನು ಸರಳಗೊಳಿಸಿ ಮತ್ತಷ್ಟು ಸುಲಭಗೊಳಿಸುವ ಮತ್ತು ದೇಶದಾದ್ಯಂತ ಪ್ರತಿ ಮನೆಗೂ ಸಂತೋಷ ಉಂಟು ಮಾಡುವ ನೈಜ ಜನ ಕೇಂದ್ರಿತ ಸುಧಾರಣೆ ಇದಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.