ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಸರಳಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ಮತ್ತು ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಜಿಎಸ್‌ಟಿ ಜಾರಿಯಿಂದ ದೇಶದಾದ್ಯಂತ ತೆರಿಗೆ ಪದ್ಧತಿ ಸರಳವಾಗಿತ್ತು. ಆದರೆ ಇಷ್ಟು ವರ್ಷಗಳ ಅನುಭವದ ನಂತರ ಜಿಎಸ್‌ಟಿಯಲ್ಲಿ ಕೆಲ ಬದಲಾವಣೆಗಳು ಆಗಬೇಕು ಎಂಬ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿ ವ್ಯಕ್ತವಾಗಿದೆ. ರೈತ ಸಂಘಟನೆಗಳು, ವ್ಯಾಪಾರಿಗಳು, ಆರ್ಥಿಕ ತಜ್ಞರೂ ಈ ಬಗ್ಗೆ ಮನವಿ ಸಲ್ಲಿಸಿದ್ದರು’ ಎಂದು ಹೇಳಿದ್ದಾರೆ.
‘ಜನರ ಮನವಿಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಂಡಿದ್ದಾರೆ. ಜಿಎಸ್‌ಟಿ ಮಂಡಳಿ ಮತ್ತು ಸಚಿವರ ಗುಂಪು ಹಲವು ಸಭೆಗಳನ್ನು ನಡೆಸಿ, ಜಿಎಸ್‌ಟಿ ಸರಳೀಕರಣದ ಮಾರ್ಗಗಳನ್ನು ಪರಿಶೀಲಿಸಿದೆ. ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಿದೆ’ ಎಂದು ಮಾಹಿತಿ ನೀಡಿದರು.
‘ದಿನಬಳಕೆ ವಸ್ತುಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್ ಅನ್ನು ತೆಗೆದುಹಾಕುವ ಅಥವಾ ಕಡಿಮೆ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇದೆ. ಇದರಿಂದ ಉತ್ಪಾದಕರಿಗೆ, ವ್ಯಾಪಾರಗಳಿಗೆ ಮತ್ತು ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ. ಜಿಎಸ್‌ಟಿ ಮಂಡಳಿಯಲ್ಲಿ ಒಪ್ಪಿತವಾಗಿರುವ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರವು ಶೀಘ್ರವೇ ಜಾರಿಗೆ ತರಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.