ADVERTISEMENT

ಜಿಎಸ್‌ಟಿ ಸರಳೀಕರಣದ ಲಾಭ ಜನರಿಗೆ ಸಿಗಲಿ: ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 15:42 IST
Last Updated 2 ಸೆಪ್ಟೆಂಬರ್ 2025, 15:42 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ‘ಕೇಂದ್ರ ಸರ್ಕಾರ ಮುಂದಿಟ್ಟಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಸರಳೀಕರಣ ವ್ಯವಸ್ಥೆಯನ್ನು ನಾವು (ರಾಜ್ಯ ಸರ್ಕಾರ) ಸ್ವಾಗತಿಸುತ್ತೇವೆ. ಆದರೆ, ಈ ವ್ಯವಸ್ಥೆ ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿರಬೇಕು. ಸರಳೀಕರಣದ ಲಾಭ ಸಂಪೂರ್ಣವಾಗಿ ಜನರಿಗೆ ಸಿಗಬೇಕೇ ಹೊರತು ಕಂಪನಿಗಳಿಗೆ ಅಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಯಾದ ನಂತರ ರಾಜ್ಯದ ಆದಾಯದಲ್ಲಿ ವಾರ್ಷಿಕ ಸರಾಸರಿ ₹70 ಸಾವಿರ ಕೋಟಿ ಖೋತಾ ಆಗುತ್ತಿದೆ. ಇದೀಗ ಕೇಂದ್ರ ಸರ್ಕಾರದ ದರ ಸರಳೀಕರಣ ಪ್ರಸ್ತಾವನೆಯಿಂದ ಹೆಚ್ಚುವರಿ ₹ 15 ಸಾವಿರ ಕೋಟಿ ಖೋತಾ ಆಗಲಿದೆ’ ಎಂದರು.

‘ಜಿಎಸ್‌ಟಿ ಜಾರಿಗೊಂಡ ನಂತರ ಕೇಂದ್ರದ ತೆರಿಗೆಯಲ್ಲಿ ಕರ್ನಾಟಕದ ಪಾಲು 2016-17ರಿಂದ 2024-25ಕ್ಕೆ ಹೋಲಿಸಿದರೆ ವಾರ್ಷಿಕ ₹21,977 ಕೋಟಿ ಕಡಿತವಾಗಿದೆ. ಕೇಂದ್ರ ಪುರಸ್ಕೃತ ಯೋಜನೆಯಲ್ಲಿ ಕರ್ನಾಟಕಕ್ಕೆ ಬರುವ ಅನುದಾನ ವಾರ್ಷಿಕ ₹ 18,870 ಕೋಟಿ ಕಡಿತಗೊಂಡಿದೆ’ ಎಂದರು.

ADVERTISEMENT

‘ಪ್ರಸ್ತಾವಿತ ಜಿಎಸ್‌ಟಿ ದರ ಸರಳೀಕರಣದಿಂದ ರಾಜ್ಯ ಸರ್ಕಾರಗಳಿಗೆ ಯಾವ ಪ್ರಮಾಣದಲ್ಲಿ ಆದಾಯ ಖೋತಾ ಆಗಬಹುದು ಎಂಬ ಅಂದಾಜಿನ ಕುರಿತು ಕೇಂದ್ರ ಸರ್ಕಾರ ಈವರೆಗೂ ಮಾಹಿತಿ ನೀಡಿಲ್ಲ. ಕೆಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ₹ 2.50 ಲಕ್ಷ ಕೋಟಿವರೆಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿವೆ’ ಎಂದ ಅವರು, ‘ಹೊಸ ವ್ಯವಸ್ಥೆ ಜಾರಿಯಾಗಿ ರಾಜ್ಯಗಳ ಆದಾಯ ಹಾಗೂ ಜಿಎಸ್‌ಟಿ ಸ್ಥಿರಗೊಳ್ಳುವವರೆಗೆ ಜಿಎಎಸ್‌ಟಿ ಕೌನ್ಸಿಲ್ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯಗಳಿಗೆ ಹೆಚ್ಚಿನ ನಷ್ಟವಾದರೆ ಅಂತಿಮವಾಗಿ ಜನ‌ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುತ್ತಾರೆ. ರಾಜ್ಯಗಳ ಸ್ವಾಯತ್ತತೆ ತುಂಬಾ ಮುಖ್ಯವಾದ ವಿಚಾರ’ ಎಂದರು.

ರಾಜ್ಯಗಳ ಆದಾಯದಲ್ಲಿ ಕೊರತೆ ಉಂಟಾಗಿ ಸರ್ಕಾರ ನಡೆಸಲು ಕೇಂದ್ರದ ಕಡೆ ಕೈಚಾಚುವಂತಾದರೆ ರಾಜ್ಯಗಳ ಸ್ವಾಯತ್ತತೆ ಎಂಬ ಪದವೇ ಅರ್ಥ ಕಳೆದುಕೊಳ್ಳಲಿದೆ‌
ಕೃಷ್ಣ ಬೈರೇಗೌಡಕಂದಾಯ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.