ಬೆಂಗಳೂರು: ‘ಜಿಎಸ್‌ಟಿ ಕಡಿತ ಮತ್ತು ಸರಳೀಕರಣದ ತೀರ್ಮಾನದಿಂದ ಭಾರತ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಲಿದೆ. ಇದು ಮುಂದಿನ ತಲೆಮಾರಿನ ಸುಧಾರಣೆಗೆ ಮಹತ್ವದ ಹೆಜ್ಜೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.
ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿರುವ ಅವರು, ‘ಜಿಎಸ್‌ಟಿ ಜಾರಿ, ತೆರಿಗೆ ಸಂಗ್ರಹ ಅತ್ಯಂತ ಸವಾಲಿನ ಕೆಲಸವಾಗಿತ್ತು. ಆರಂಭದಲ್ಲಿ ರಾಜ್ಯಗಳೂ ಕೂಡ ಹಿಂಜರಿಕೆಯಿಂದಲೇ ಇದ್ದವು. ನಂತರ ಇದು ಆರ್ಥಿಕ ಬೆಳವಣಿಗೆಯ ಬುನಾದಿ ಎಂಬುದನ್ನು ಅರಿತವು. ಜಿಎಸ್‌ಟಿ ಸರಳೀಕರಣದ ನಿರ್ಧಾರ ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವಲ್ಲಿ ನೆರವಾಗಲಿದೆ’ ಎಂದು ಹೇಳಿದ್ದಾರೆ.
‘ನಾನು ಮುಖ್ಯಮಂತ್ರಿಯಾಗಿದ್ದಾಗ ಜಿಎಸ್‌ಟಿ ಕೌನ್ಸಿಲ್ ತಂಡದ ನಾಯಕತ್ವ ವಹಿಸಿಕೊಳ್ಳಲು ಅವಕಾಶ ಸಿಕ್ಕಿದ್ದು, ತೆರಿಗೆ ಸುಧಾರಣೆಯಲ್ಲಿ ಸಾಕಷ್ಟು ಸಲಹೆಗಳನ್ನು ನೀಡಲಾಗಿತ್ತು. ಪ್ರಸ್ತುತ ನೀವು ವೈಯಕ್ತಿಕ ಮುತುವರ್ಜಿ ವಹಿಸಿ ತೆರಿಗೆ ಸುಧಾರಣೆ ಮತ್ತು ಸ್ಲ್ಯಾಬ್ ಕಡಿತ ಮಾಡಲು ತೀರ್ಮಾನಿಸಿದ್ದು, ಇದನ್ನು ಇಡೀ ದೇಶ ಮುಕ್ತ ಮನಸ್ಸಿನಿಂದ ಸ್ವಾಗತಿಸಿದೆ. ವಿಶೇಷವಾಗಿ ವಾಣಿಜ್ಯೋದ್ಯಮ ಸಮುದಾಯ ಸಂತಸಗೊಂಡಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ಸಾಕಷ್ಟು ವಾಣಿಜ್ಯ ವಹಿವಾಟುಗಳು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಲಿವೆ. ತೆರಿಗೆ ಸಂಗ್ರಹದಲ್ಲೂ ಹೆಚ್ಚಳವಾಗಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.