ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಆಯ್ಕೆಗೆ ನಡೆಯಬೇಕಿದ್ದ ಕೌನ್ಸೆಲಿಂಗ್ ಅನ್ನು ಕಾಲೇಜು ಶಿಕ್ಷಣ ಇಲಾಖೆ ಮುಂದೂಡಿದೆ.
ಸಂಸ್ಕೃತ ಮತ್ತು ಚಿತ್ರಕಲಾ ಕಾಲೇಜುಗಳೂ ಸೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಕಾಯಂ ಅಧ್ಯಾಪಕರಿಗೆ ಬೋಧನಾ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಯುವ ಕಾರ್ಯಭಾರಕ್ಕೆ ಅನುಗುಣವಾಗಿ 2024-25ನೇ ಸಾಲಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಇದೇ ಜ. 2 ರಂದು ಅರ್ಜಿ ಆಹ್ವಾನಿಸಲಾಗಿತ್ತು. ವೇಳಾಪಟ್ಟಿಯಂತೆ ಪ್ರಕ್ರಿಯೆಗಳೂ ಆರಂಭವಾಗಿ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಲಾಗಿತ್ತು. ಸ್ಥಳ ಆಯ್ಕೆಯ ಕೌನ್ಸೆಲಿಂಗ್ ಬಾಕಿ ಇತ್ತು. ಹೈಕೋರ್ಟ್ ಧಾರವಾಡ ಪೀಠ ನೀಡಿದ ತಡೆಯಾಜ್ಞೆ ಅನ್ವಯ ಕೌನ್ಸೆಲಿಂಗ್ ಮುಂದೂಡಲಾಗಿದೆ.
ಈಗಾಗಲೇ 2,4 ಹಾಗೂ 6ನೇ ಸೆಮಿಸ್ಟರ್ ತರಗತಿಗಳು ಆರಂಭವಾಗಿರುವ ಕಾರಣ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿ ಇಟ್ಟುಕೊಂಡು ಹೈಕೋರ್ಟ್ ನಿರ್ದೇಶನದಂತೆ ಯುಜಿಸಿ ನಿಯಮಗಳ ಪ್ರಕಾರ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿತ್ತು. ಇದರಿಂದ ಯುಜಿಸಿ ಅರ್ಹತೆ ಪಡೆಯದ 5 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ಅವಕಾಶ ವಂಚಿತರಾದ ಉಪನ್ಯಾಸಕರು ಕೋರ್ಟ್ ಮೊರೆ ಹೋಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.