ಬೆಂಗಳೂರು: ಸೇವಾ ಭದ್ರತೆಗೆ ಆಗ್ರಹಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಆರಂಭಿಸಿದರು.
ಕನಿಷ್ಠ ಮೂರು ವರ್ಷಗಳು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಬೇಕು. ಅಲ್ಲಿಯವರೆಗೂ 2018ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ ಹೊರಡಿಸಿದ್ದ ಆದೇಶದಂತೆ ಪ್ರತಿ ಗಂಟೆಗೆ ₹1,500 ವೇತನದಂತೆ ತಿಂಗಳಿಗೆ ಕನಿಷ್ಠ ₹50 ಸಾವಿರ ವೇತನ ನಿಗದಿ ಮಾಡಬೇಕು. ಪ್ರತಿ ವರ್ಷ ಕೌನ್ಸೆಲಿಂಗ್ ನಡೆಸುವ ಬದಲು ಸೇವಾಜ್ಯೇಷ್ಠತೆಯ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಉನ್ನತ ಶಿಕ್ಷಣ ಸಚಿವರು ಈಚೆಗೆ ನೀಡಿದ ನಾಲ್ಕು ಭರವಸೆಗಳಿಂದ ನೈಜ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ. ಸೇವಾ ಭದ್ರತೆ ಇಲ್ಲದ ಭರವಸೆಗಳಿಂದ ಯಾವ ಪ್ರಯೋಜನವೂ ಇಲ್ಲ. 60 ವರ್ಷಕ್ಕೆ ₹5 ಲಕ್ಷ ಧನಸಹಾಯದ ಭರವಸೆ ಇದೆ. ಆದರೆ, ಸಹಾಯಕ ಪ್ರಾಧ್ಯಾಪಕರ ನೇಮಕ, ವರ್ಗಾವಣೆಯಿಂದ ಕಾರ್ಯಭಾರ ಕಡಿಮೆಯಾಗುತ್ತಿದೆ. ಪ್ರತಿವರ್ಷ ನಡೆಸುವ ಕೌನ್ಸೆಲಿಂಗ್‌ನಿಂದ ಬಹಳಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಸಹಾಯಧನ ನೀಡುವ ಮೊದಲು 60 ವರ್ಷದವರೆಗೆ ಸೇವಾ ಭದ್ರತೆಯ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕ ಅಸ್ವಸ್ಥ ಧರಣಿ ನಡೆಯುತ್ತಿದ್ದ ವೇಳೆ ತುಮಕೂರಿನ ಅತಿಥಿ ಉಪನ್ಯಾಸಕ ಲೋಕೇಶ್ ಅವರು ಅಸ್ವಸ್ಥರಾದರು. ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಯಿತು. ನಿರಂತರ ಪ್ರತಿಭಟನೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಬಳಲಿದ್ದರು. ಆರೈಕೆಯ ನಂತರ ಚೇತರಿಸಿಕೊಂಡಿದ್ದಾರೆ ಎಂದು ಸಂಘಟನೆಯ ಮುಖಂಡರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.