ADVERTISEMENT

ಪ್ರೌಢಶಾಲೆಗಳಿಗೆ 3473 ಅತಿಥಿ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 14:54 IST
Last Updated 11 ಫೆಬ್ರುವರಿ 2021, 14:54 IST

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಪರ್ಯಾಯವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ. ಬೆಂಗಳೂರು ವಿಭಾಗದಲ್ಲಿ 430, ಮೈಸೂರು 808, ಬೆಳಗಾವಿ 982 ಹಾಗೂ ಕಲಬುರ್ಗಿ ವಿಭಾಗದಲ್ಲಿ 1,253 ಸೇರಿದಂತೆ ಒಟ್ಟು 3,473 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಮಾಸಿಕ ಗೌರವ ಸಂಭಾವನೆ ₹8 ಸಾವಿರ ನಿಗದಿ ಮಾಡಲಾಗಿದೆ.

ಅನುದಾನಿತ ಶಾಲೆಗಳಲ್ಲಿ ಇರುವ ಹೆಚ್ಚುವರಿ ಶಿಕ್ಷಕರನ್ನು ಕೊರತೆ ಇರುವ ಸರ್ಕಾರಿ ಶಾಲೆಗಳಲ್ಲಿ ಒಒಡಿ ಆಧಾರದ ಮೇಲೆ ಹಂಚಿಕೆ ಮಾಡುವಂತೆ ಆಯಾ ಜಿಲ್ಲೆ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲಾಖೆ ಸೂಚಿಸಿದೆ. ಯಾವುದೇ ಶಾಲೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಲ್ಲಿ ಈ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ADVERTISEMENT

ಫೆ.21ರಿಂದ ಮೇ 21ರವರೆಗೆ ಈ ಆದೇಶ ಅನ್ವಯವಾಗಲಿದೆ. ಅಂದರೆ, ನಾಲ್ಕು ತಿಂಗಳವರೆಗೆ ಮಾತ್ರ ಅನುದಾನದ ಬೇಡಿಕೆ ಸಲ್ಲಿಸಲಾಗಿದೆ ಎಂದೂ ಇಲಾಖೆ ಹೇಳಿದೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ನಿಗದಿತ ಪಠ್ಯಕ್ರಮ ಈವರೆಗೆ ಮುಗಿದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.