ADVERTISEMENT

ಕೋವಿಡ್‌ ಹೆಚ್ಚಳ | ಮಾರ್ಗಸೂಚಿ ಪರಿಷ್ಕರಣೆ ಸಾಧ್ಯತೆ: ತುರ್ತು ಸಭೆ ಕರೆದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 10:08 IST
Last Updated 22 ಏಪ್ರಿಲ್ 2021, 10:08 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಸಚಿವರು, ಸಂಸದರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಗುರುವಾರ ಸಂಜೆ 4 ಗಂಟೆಗೆ ತುರ್ತುಸಭೆ ಕರೆದಿದ್ದಾರೆ. ವರ್ಚುವಲ್‌ (ವಿಡಿಯೊ ಸಂವಾದ) ಮೂಲಕ ಈ ಸಭೆ ನಡೆಯಲಿದೆ.

ಕೋವಿಡ್‌ ನಿಯಂತ್ರಿಸುವ ಸಂಬಂಧ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಸೇರಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ. ಈ ಮಾರ್ಗಸೂಚಿಯನ್ನು ಪರಿಷ್ಕರಿಸಿ ಇನ್ನಷ್ಟು ಬಿಗಿ ಕ್ರಮಗಳನ್ನು ತೆಗಗೆದುಕೊಳ್ಳುವ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

‘ಮುಖ್ಯಮಂತ್ರಿಯವರು ಕಾವೇರಿಯ ತಮ್ಮ ನಿವಾಸದಿಂದ ವರ್ಚುವಲ್‌ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಧಿಕಾರಿಗಳು ವಿಧಾನಸೌಧದಿಂದ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

’ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಜೊತೆಗೆ ಸಾವಿನ ಸಂಖ್ಯೆಯೂ ಏರುತ್ತಿದೆ. ಹೀಗಾಗಿ, ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಮತ್ತು ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದ್ದು, ಅತ್ಯಂತ ಕಠಿಣ ಕ್ರಮಗಳ ತೆಗೆದುಕೊಳ್ಳಬೇಕಾದ ಬಗ್ಗೆ ಚರ್ಚೆ ನಡೆದಿದೆ. ಈ ಕಾರಣಕ್ಕೆ ಮಾರ್ಗಸೂಚಿಯನ್ನು ಈಗಾಗಲೇ ಪರಿಷ್ಕರಿಸಿ, ಸಿದ್ಧಪಡಿಸಲಾಗಿದೆ. ಈ ಪರಿಷ್ಕೃತ ಮಾರ್ಗಸೂಚಿ ಬಗ್ಗೆ ಚರ್ಚೆ ನಡೆದು, ಅಂತಿಮಗೊಳಿಸಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.