ADVERTISEMENT

ಗ್ರಾ.ಪಂ: ಮೀಸಲಾತಿಗೆ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 19:31 IST
Last Updated 2 ಜನವರಿ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗೆ ಮೀಸಲಾತಿ ನಿಗದಿಪಡಿಸಲು ರಾಜ್ಯ ಅನುಸರಿಸಬೇಕಾದ ವಿಧಾನಗಳ ಕುರಿತು ರಾಜ್ಯ ಚುನಾವಣಾ ಆಯೋಗ ಮಾರ್ಗಸೂಚಿಗಳನ್ನು ಶನಿವಾರ ಪ್ರಕಟಿಸಿದೆ.

1993ರಲ್ಲಿ ನಡೆದ ಮೊದಲ ಚುನಾವಣೆ ಹಾಗೂ ನಂತರದಲ್ಲಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಮೀಸಲಾತಿಗಳನ್ನು ಆಧರಿಸಿ 5,956 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಸರದಿಯನ್ನು ನಿರ್ಧರಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈ ಸಮುದಾಯಗಳ ಒಟ್ಟು ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ.

ತಾಲ್ಲೂಕುವಾರು ಗ್ರಾ.ಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸುವಾಗ ಎಸ್‌.ಸಿ., ಎಸ್‌ಟಿ, ಹಿಂದುಳಿದ ವರ್ಗಗಳ ಸದಸ್ಯರ ಸಂಖ್ಯೆ ಹೆಚ್ಚಿರುವ ಗ್ರಾ.ಪಂ.ಗಳಲ್ಲೇ ಈ ವರ್ಗಗಳಿಗೆ ಅವಕಾಶ ಕಲ್ಪಿಸಬೇಕು. ಒಂದು ವರ್ಗಕ್ಕೆ ಸೇರಿದ ಸದಸ್ಯರ ಸಂಖ್ಯೆ ಸಮನಾಗಿರುವ ಗ್ರಾ.ಪಂಗಳ ಸಂಖ್ಯೆ ಹೆಚ್ಚು ಇದ್ದಲ್ಲಿ, ಲಾಟರಿ ಮೂಲಕ ನಿರ್ಧರಿಸಬೇಕು. ಎಸ್‌.ಸಿ., ಎಸ್‌.ಟಿ., ಹಿಂದುಳಿದ ವರ್ಗ(ಎ), ಹಿಂದುಳಿದ ವರ್ಗ (ಬಿ), ಸಾಮಾನ್ಯ ಮಹಿಳೆ ಮತ್ತು ಸಾಮಾನ್ಯ ವರ್ಗಗಳಿಗೆ ಅನುಕ್ರಮವಾಗಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಸಬೇಕು ಎನ್ನಲಾಗಿದೆ.

ADVERTISEMENT

ಅಧ್ಯಕ್ಷ ಹುದ್ದೆ ನಂತರ, ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ನಿಗದಿ ಮಾಡಬೇಕು. ಎರಡೂ ಹುದ್ದೆಗೆ ಒಂದೇ ಮೀಸಲಾತಿ ನಿಗದಿಯಾಗಬಾರದು, ತಾಲ್ಲೂಕಿನ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.