ADVERTISEMENT

ಹಳೇ ಮೈಸೂರಿನಲ್ಲಿ ಕಮಲದ ಬೇರು ಗಟ್ಟಿಗೊಳಿಸುವ ಚಿಂತನೆ ಶುರು: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 13:09 IST
Last Updated 8 ಡಿಸೆಂಬರ್ 2022, 13:09 IST
ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (ಪಿಟಿಐ ಚಿತ್ರ)
ಕಾರ್ಯಕ್ರಮವೊಂದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (ಪಿಟಿಐ ಚಿತ್ರ)    

ಬೆಂಗಳೂರು: ಗುಜರಾತ್‌ನಂತೆಯೇ ಕರ್ನಾಟಕದಲ್ಲಿಯೂ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. ಗುಜರಾತಿನ ಗೆಲುವು ಹಳೇ ಮೈಸೂರು ಭಾಗದಂಥ ಕಡೆಗಳಲ್ಲಿ ಕಮಲದ ಬೇರುಗಳನ್ನು ಗಟ್ಟಿಗೊಳಿಸುವ ಚಿಂತನೆಗೆ ಹಚ್ಚಿದೆ ಎಂದು ರಾಜ್ಯ ಬಿಜೆಪಿಯ ಅಧಿಕೃತ ಟ್ವಿಟರ್‌ ಖಾತೆಯಿಂದ ಗುರುವಾರ ಪೋಸ್ಟ್‌ ಪ್ರಕಟಿಸಲಾಗಿದೆ.

ಗುಜರಾತ್‌ ವಿಧಾನಸಭೆ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಬಿಜೆಪಿ 156 ಕ್ಷೇತ್ರಗಳಲ್ಲಿ ಗೆಲುವು/ ಮುನ್ನಡೆ ಸಾಧಿಸಿದೆ. ಸತತ ಏಳನೇ ಬಾರಿಗೆ ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರುತ್ತಿದ್ದು, ಈ ಬಾರಿ ಪ್ರಚಂಡ ಜಯ ಸಾಧಿಸಿದೆ. ಕಾಂಗ್ರೆಸ್‌ನ ಬಿಗಿ ಹಿಡಿತವಿದ್ದ ಪ್ರದೇಶ, ಕ್ಷೇತ್ರಗಳನ್ನೂ ಬಿಜೆಪಿ ಈ ಬಾರಿ ತನ್ನ ತೆಕ್ಕೆಗೆ ಪಡೆದಿದೆ.

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಹಳೇ ಮೈಸೂರು ಭಾಗದಲ್ಲಿ ಗೆಲ್ಲುವ ತನ್ನ ಬಹುಕಾಲದ ಅಪೇಕ್ಷೆಯನ್ನು ಬಹಿರಂಗವಾಗಿ ಹೊರ ಹಾಕಿದೆ.

ADVERTISEMENT

‘ಸರ್ವರಿಗೂ ಸಮಪಾಲನ್ನು ಹಂಚಿದ್ದರಿಂದಲೇ ಗುಜರಾತ್‌ನಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಸೌರಾಷ್ಟ್ರ, ಉತ್ತರ ಗುಜರಾತ್‌ನಂಥ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯ ಯಜ್ಞ ನಡೆದಿದ್ದರಿಂದ ಕಮಲ ಅರಳಿದೆ. ಇದು ಕರ್ನಾಟಕದ ಪಾಲಿಗೆ ದಿಕ್ಸೂಚಿ. ಗುಜರಾತಿನ ಈ ಗೆಲುವು ಬಿಜೆಪಿಯಲ್ಲಿ ನವೋತ್ಸಾಹ ಮೂಡಿಸಿದೆ. ಕಳೆದ ಬಾರಿಗಿಂತಲೂ ಈ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಬಿಜೆಪಿಯ ಅಭಿವೃದ್ಧಿಯ ದಿವ್ಯ ಮಂತ್ರ ಯಶಸ್ವಿಯಾಗಿದೆ. ಇದು ಕರ್ನಾಟಕದ ಮುಂದಿನ ಚುನಾವಣೆಗೆ ಗೆಲುವಿನ ರಹದಾರಿಯನ್ನು ತೋರಿದೆ’ ಎಂದು ಹೇಳಿದೆ.

‘ಗುಜರಾತ್‌ನಂತೆಯೇ ಕರ್ನಾಟಕದಲ್ಲಿಯೂ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. ಗುಜರಾತಿನ ಗೆಲುವು ಹಳೇ ಮೈಸೂರು ಭಾಗದಂಥ ಕಡೆಗಳಲ್ಲಿ ಕಮಲದ ಬೇರುಗಳನ್ನು ಗಟ್ಟಿಗೊಳಿಸುವ ಚಿಂತನೆಗೆ ಹಚ್ಚಿದೆ’ ಎಂದು ತಿಳಿಸಿದೆ.

‘ಕರ್ನಾಟಕದ ಮುಂದಿನ ವಿಧಾನಸಭಾ ಚುನಾವಣೆ ಗೆಲುವಿನ ಸೂತ್ರ ಗುಜರಾತಿನ ಗೆಲುವಿನಲ್ಲಿದೆ. ಸಮರ್ಥ ನಾಯಕತ್ವ, ಸಮಗ್ರ ಅಭಿವೃದ್ಧಿ ಮಂತ್ರಗಳು, ಅದನ್ನು ಜನ-ಮನಕ್ಕೆ ತಲುಪಿಸಿರುವುದರಿಂದಲೇ ಬಿಜೆಪಿಗೆ ಜನರು ಆಶೀರ್ವದಿಸಿರುವುದು. ಇದು ಕರ್ನಾಟಕಕ್ಕೆ ಮಾದರಿ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬುದು ಕೇವಲ ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ಆಶಯವಾಗಿರಲಿಲ್ಲ. ಅದು ಸಮರ್ಥವಾಗಿ ಜಾರಿಯಾದ್ದರಿಂದಲೇ ಗುಜರಾತಿನ ಬುಡಕಟ್ಟು ಸಮುದಾಯದ 20 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು. ಈ ಫಲಿತಾಂಶ ರಾಜ್ಯ ಬಿಜೆಪಿಗೆ ಮಾದರಿ ಮತ್ತು ಸ್ಫೂರ್ತಿಯಾಗಿದೆ’ ಎಂದು ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.