ADVERTISEMENT

‘ಸಚಿವ ಪ್ರಲ್ಹಾದ ಜೋಶಿ, ಕೆ. ಸುಧಾಕರ್‌ ಕನ್ನಡ ದ್ರೋಹಿಗಳು’: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 16:01 IST
Last Updated 11 ಏಪ್ರಿಲ್ 2022, 16:01 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ‘ಹಿಂದಿ ಹೇರಿಕೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ರಾಜ್ಯದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಕನ್ನಡ ದ್ರೋಹಿಗಳು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಅಮಿತ್‌ ಶಾ ಹೇಳಿಕೆ ವಿರೋಧಿಸಿ ಹೋರಾಟ ಹಮ್ಮಿಕೊಳ್ಳುವ ಕುರಿತು ಕನ್ನಡ ಪರ ಸಂಘಟನೆಗಳು ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಹಿಂದಿನ 75 ವರ್ಷಗಳಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಿರಲಿಲ್ಲ. ಈಗ ಅದನ್ನು ಹಾಳುಮಾಡುವ ಕೆಲಸ ನಡೆಯುತ್ತಿದೆ. ಆರ್‌ಎಸ್‌ಎಸ್‌ನ ಗುಪ್ತ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಯತ್ನ ಆರಂಭಿಸಿದೆ. ಹಿಂದಿ ಹೇರಿಕೆ ಕೂಡ ಅದರ ಭಾಗವೇ ಆಗಿದೆ. ಈ ನಿಲುವನ್ನು ರಾಜ್ಯದ ಬಿಜೆಪಿ ನಾಯಕರು ಮತ್ತು ಸಚಿವರು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದರು.

ADVERTISEMENT

ಭಾಷೆ, ನದಿ ನೀರಿನ ವಿಚಾರದಲ್ಲಿ ಕರ್ನಾಟಕ ಹಾಗೂ ಕನ್ನಡಿಗರನ್ನು ಕೇಂದ್ರ ಸರ್ಕಾರ ಲಘುವಾಗಿ ಪರಿಗಣಿಸುತ್ತಿದೆ. ರಾಜ್ಯದ ಜನರು ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಇಲ್ಲಿನ ಸಚಿವರು ಕೇಂದ್ರ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕನ್ನಡ ಕುರಿತು ಅವರ ನಿಲುವೇನು? ಅವರಿಗೆ ಹಿಂದಿಯ ಮೇಲೇಕೆ ಮೋಹ? ಕನ್ನಡದ ನಿರ್ಲಕ್ಷ್ಯ ಏಕೆ? ಇಂತಹ ನಾಯಕರನ್ನು ಕನ್ನಡ ದ್ರೋಹಿಗಳೆನ್ನದೆ ಬೇರೆ ಏನೆಂದು ಕರೆಯಬೇಕು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಖಾಸಗಿ ಕ್ಷೇತ್ರದಲ್ಲಿನ ಸ್ಪರ್ಧೆ ಎದುರಿಸಲು ಇಂಗ್ಲಿಷ್‌ ಭಾಷೆಯ ಬಳಕೆ ಅನಿವಾರ್ಯವಾಗಿದೆ. ಕನ್ನಡದ ಜ್ಞಾನದ ಜತೆಗೆ ಇಂಗ್ಲಿಷ್‌ ಕೂಡ ಬೇಕಾಗಿದೆ. ಆದರೆ, ಹಿಂದಿ ಹೇರಿಕೆ ಏಕೆ ಬೇಕಿದೆ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.