ADVERTISEMENT

ಮಾಧ್ಯಮಗಳು ಟಿಆರ್‌ಪಿಗಾಗಿ ಸಮಾಜ ಒಡೆಯುತ್ತಿವೆ: ಎಚ್‌.ಡಿ ಕುಮಾರಸ್ವಾಮಿ

ವಿಧಾನಸಭೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 17:11 IST
Last Updated 30 ಮಾರ್ಚ್ 2022, 17:11 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಬೆಂಗಳೂರು: ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಮಾಧ್ಯಮಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಸಾಮಾಜಿಕ ಸ್ವಾಸ್ಥ್ಯ ಉಂಟುಮಾಡುವ ಸೂಕ್ಷ್ಮ ವಿಷಯಗಳನ್ನು ವೈಭವೀಕರಿಸಿ ಪ್ರಸಾರ ಮಾಡುತ್ತಿವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹರಿಹಾಯ್ದರು.

ವಿಧಾನಸಭೆಯಲ್ಲಿ ಬುಧವಾರ ಚುನಾವಣಾ ಸುಧಾರಣೆ ಕುರಿತ ಚರ್ಚೆಯ ವೇಳೆ ಮಾಧ್ಯಮಗಳ ವಿಷಯವನ್ನೂ ಪ್ರಸ್ತಾಪಿಸಿದ ಅವರು, ‘ಶಾಲಾ ಮಕ್ಕಳ ಸಮವಸ್ತ್ರದ ವಿಷಯದಲ್ಲಿ ಮಾಧ್ಯಮಗಳು ಪ್ರಸಾರ ಮಾಡಿದ ವರದಿಗಳಿಂದ ಸಮಾಜ ಕಲುಷಿತವಾಗಿದೆ. ಹಿಜಾಬ್‌, ಜಾತ್ರೆ ಅಂಗಡಿ ವಿಚಾರ ಮುಗಿಸಿ ಈಗ ಹಲಾಲ್‌ ಹಿಡಿದುಕೊಂಡಿದ್ದಾರೆ. ಚಾನೆಲ್‌ಗಳ ಪ್ರತಿನಿತ್ಯದ ಎಪಿಸೋಡುಗಳಿಗಾಗಿ ಈ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ದು ನಿಲ್ಲಿಸುತ್ತೀರಿ’ ಎಂದು ಪ್ರಶ್ನಿಸಿದರು.

‘ದೂರು ಹೇಳುವವರು, ವಿಚಾರಣೆ ನಡೆಸುವವರು, ವಾದ ಮಂಡಿಸುವವರು, ತೀರ್ಪು ಕೊಡುವವರು ಎಲ್ಲರ ಕೆಲಸವನ್ನೂ ಟಿ.ವಿ. ಚಾನೆಲ್‌ಗಳೇ ಮಾಡುತ್ತವೆ. ಯಾರನ್ನು ಬೇಕಾದರೂ ಮೇಲಕ್ಕೆ ಎತ್ತುತ್ತವೆ, ಯಾರನ್ನು ಬೇಕಾದರೂ ಕೆಳಕ್ಕೆ ತಳ್ಳುತ್ತವೆ. ಇವತ್ತು ರಾಜ್ಯದಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದಕ್ಕೆ ಮಾಧ್ಯಮಗಳೇ ಕಾರಣ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಯುಗಾದಿ ಮರುದಿನ ವರ್ಷತೊಡಕು ಆಚರಿಸುವವರು ನಾವು. ಹಲಾಲ್‌ ಮಾಂಸ, ಗುಡ್ಡೆ ಮಾಂಸ ಎಂದೆಲ್ಲ ನೋಡದೆ ಮಾಂಸ ತಂದು ಭಕ್ಷ್ಯ ತಯಾರಿಸಿ ಸೇವಿಸುತ್ತೇವೆ. ನಮ್ಮ ಹಿಂದೂ ಸಮಾಜದಲ್ಲಿನ ಕೆಲವು ಕಿಡಿಗೇಡಿಗಳು ಅದನ್ನೂ ಈಗ ರಾಜಕೀಯಕ್ಕೆ ಬಳಸುತ್ತಿದ್ದಾರೆ. ಇಂತಹ ಪ್ರಚೋದನಕಾರಿ ಸುದ್ದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದು’ ಎಂದು ಕೋರಿದರು.

ಹಲಾಲ್‌ ಮಾಂಸ ಖರೀದಿಸದಂತೆ ಹಾಗೂ ಮುಸ್ಲಿಮರ ಬಳಿ ವ್ಯಾಪಾರ ವಹಿವಾಟು ನಡೆಸದಂತೆ ವಾಟ್ಸ್‌ ಆ್ಯಪ್‌ಗಳಲ್ಲಿ ಹರಿಯಬಿಟ್ಟಿರುವ ಸಂದೇಶವನ್ನು ಸದನದಲ್ಲಿ ಓದಿದರು.

ಕುಮಾರಸ್ವಾಮಿ ಅವರು ಮಾಧ್ಯಮಗಳ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವಾಗ ಮಧ್ಯ ಪ್ರವೇಶಿಸಿದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ‘ನೀವು ಜನಮಾನಸದ ಅಭಿಪ್ರಾಯ ಹೇಳುತ್ತಿದ್ದೀರಿ’ ಎಂದು ಸಹಮತ ವ್ಯಕ್ತಪಡಿಸಿದರು.

ರಾಜಾ ಹುಲಿ, ಬೆಟ್ಟದ ಹುಲಿ, ಆ ಇಲಿ...!

‘ಮಾಧ್ಯಮಗಳು ನಮ್ಮ ಬಳಿ ಬಂದು ನಿಮ್ಮ ಬಗ್ಗೆ ಬರೆಯುತ್ತೇವೆ ಎಂದು ಹೇಳಿ ನಾವು ಮಾಡಿದ್ದು, ಮಾಡದೇ ಇದ್ದದ್ದು ಸೇರಿ ಬರೆಯುತ್ತಾರೆ. ‘ಧರೆಗಿಳಿದು ಬಂದ ಯತ್ನಾಳ‘, ‘ಅಭಿವೃದ್ಧಿ ಹರಿಕಾರ‘, ‘ರಾಜಾಹುಲಿ, ಬೆಟ್ಟದ ಹುಲಿ, ಆ ಇಲಿ, ಈ ಇಲಿ’ ಎಂದೆಲ್ಲ ಹೆಡ್‌ಲೈನ್‌ ಹಾಕ್ತಾರೆ. ಅದಕ್ಕಾಗಿ ₹10 ಲಕ್ಷ ಕೇಳ್ತಾರೆ. ಅದರಲ್ಲಿ ಶೇ 10 ರಷ್ಟು ಡಿಸ್ಕೌಂಟ್‌ ಕೊಡ್ತೇವೆ ಎನ್ನುತ್ತಾರೆ’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಚುನಾವಣೆ ವೇಳೆ ಒಂದು ಸುದ್ದಿ ವಾಹಿನಿಯು ‘ಯತ್ನಾಳ ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂದು ಕಾರ್ಯಕ್ರಮ ಮಾಡಿದರು. ‘ಈ ರೀತಿ ಹೇಳಲು ನೀನು ಯಾರು’ ಎಂದು ದೂರವಾಣಿ ಮಾಡಿ ಪ್ರಶ್ನಿಸಿದಾಗ, ‘ನಾನು ಸಂಪಾದಕನಿದ್ದೇನೆ’ ಎಂದ. ‘ಅದು ಹೇಗೆ ಹೇಳುತ್ತೀಯಾ’ ಎಂದು ಪ್ರಶ್ನಿಸಿದೆ. ಅಷ್ಟೇ ಅಲ್ಲ ‘ನಾನು ಗೆದ್ದು ಬಂದ ಮೇಲೆ ಫೋನ್‌ ಮಾಡುತ್ತೇನೆ’ ಎಂದೆ. ಚುನಾವಣೆಯಲ್ಲಿ ಗೆದ್ದ ಮೇಲೆ ಆ ಸಂಪಾದಕನಿಗೆ ಫೋನ್‌ ಮಾಡಿದೆ. ಆಗ ಆತ ‘ನಿಮ್ಮ ಬಗ್ಗೆ ಒಂದು ವಿಸ್ತೃತ ಕಾರ್ಯಕ್ರಮ ಮಾಡೋಣ’ ಎಂದ. ಮಾಧ್ಯಮದ ಸ್ಥಿತಿ ಹೀಗಿದೆ ನೋಡಿ’ ಎಂದು ಯತ್ನಾಳ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.