ADVERTISEMENT

ಎಚ್‌.ಆರ್.ಬಸವರಾಜಪ್ಪ ರೈತ ಸಂಘದ ಅಧ್ಯಕ್ಷ

ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ವಜಾ, ತನಿಖೆಗೆ ಸಮಿತಿ

​ಪ್ರಜಾವಾಣಿ ವಾರ್ತೆ
Published 31 ಮೇ 2022, 19:52 IST
Last Updated 31 ಮೇ 2022, 19:52 IST
ಎಚ್.ಆರ್. ಬಸವರಾಜಪ್ಪ
ಎಚ್.ಆರ್. ಬಸವರಾಜಪ್ಪ   

ಶಿವಮೊಗ್ಗ: ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿರುವ ಪದಾಧಿಕಾರಿಗಳು, ಅವರ ಸ್ಥಾನದಲ್ಲಿ ಎಚ್.ಆರ್.ಬಸರಾಜಪ್ಪ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ.

ಮಂಗಳವಾರ ಶಿವಮೊಗ್ಗದಲ್ಲಿ ತುರ್ತು ಸಭೆ ನಡೆಸಿದ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳು, ರಾಜ್ಯ ಸಮಿತಿ ಮುಖಂಡರು ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾಗೊಳಿಸುವ ಒಮ್ಮತದ ನಿರ್ಧಾರ ತೆಗೆದುಕೊಂಡರು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಆರ್.ಬಸವರಾಜಪ್ಪ, ‘ಕೋಡಿಹಳ್ಳಿ ಚಂದ್ರಶೇಖರ್ ಹೊರಗಿಟ್ಟು ಸಂಘಟನೆ ಬಲಪಡಿಸುತ್ತೇವೆ. ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಿಸಿ ರೈತ ಸಂಘಟನೆ ಬಲಪಡಿಸುತ್ತೇವೆ’ ಎಂದು ಪ್ರಕಟಿಸಿದರು.

ADVERTISEMENT

‘ರೈತ ಸಂಘದ ಮೂಲ ಸ್ಥಾಪಕರಾದ ಎಚ್.ಎಸ್.ರುದ್ರಪ್ಪ, ಡಾ.ಚಿಕ್ಕಸ್ವಾಮಿ, ಕಡಿದಾಳ್ ಶಾಮಣ್ಣ, ಎನ್.ಡಿ. ಸುಂದರೇಶ್, ಪ್ರೊ.ನಂಜುಂಡಸ್ವಾಮಿ ಅವರ ತತ್ವ–ಸಿದ್ಧಾಂತ, ಆಶಯಗಳಂತೆ ಸಂಘಟನೆ ಮುನ್ನಡೆಸಲಾಗುವುದು. ಯಾವುದೇ ಬ್ಯಾನರ್‌ಗಳಲ್ಲಿ ಅಧ್ಯಕ್ಷರ ಫೋಟೊ ಬಳಸುವುದಿಲ್ಲ. ಸಂಸ್ಥಾಪಕ ನಾಯಕರ ಫೋಟೊಗಳನ್ನಷ್ಟೇ ಬಳಸುತ್ತೇವೆ’ ಎಂದು ಹೇಳಿದರು.

‘ಇದೇ ಮೊದಲ ಬಾರಿಗೆ ರೈತ ಸಂಘದ ಅಧ್ಯಕ್ಷರನ್ನು ವಜಾ ಮಾಡಲಾಗಿದೆ. ಸತ್ಯಶೋಧನಾ ಸಮಿತಿ ತನಿಖೆ ನಂತರ ಆರೋಪ ಸಾಬೀತಾದರೆ ಸಂಘಟನೆಯಿಂದಲೇ ಉಚ್ಚಾಟಿಸಲಾಗುವುದು. ಹಿಂದೆ ರಾಜಕಾರಣಿಗಳು ಆಪಾದನೆ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಕೋಡಿಹಳ್ಳಿ ಸಹ ಆರೋಪ ಕೇಳಿ ಬಂದಾಗ ರಾಜೀನಾಮೆ ಕೊಡಬೇಕಿತ್ತು. ಹಾಗೆ ಮಾಡಿದ್ದರೆ ವಜಾ ಮಾಡುವ ಪ್ರಮೇಯ ಬರುತ್ತಿರಲಿಲ್ಲ’ ಎಂದು
ಹೇಳಿದರು.

‘ರಾಜ್ಯದ ಎಲ್ಲ ರೈತ ಸಂಘಟನೆಗಳನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಚಾಲನೆ ನೀಡಲಾಗುವುದು. ಎಲ್ಲರೂ ಒಗ್ಗೂಡಿದರೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಸಿದ್ಧ’ ಎಂದು ಭರವಸೆ ನೀಡಿದರು.

ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಮಸಿ ಬಳಿದು ಹಲ್ಲೆಗೆ ಯತ್ನಿಸಿರುವುದು ಖಂಡನೀಯ. ಸರ್ಕಾರ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಮುಖಂಡರಾದ ಡಾ.ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಶಶಿಕಾಂತ್ ಪಡಸಲಗಿ, ಸಿದ್ದವೀರಪ್ಪ, ಕುರುವ ಗಣೇಶ್, ಟಿ.ಎಂ. ಚಂದ್ರಪ್ಪ, ನಿಂಗಪ್ಪ, ಸಿದ್ದವೀರಪ್ಪ, ಸುಭಾಷ್, ಬಸವನಗೌಡ ಪಾಟೀಲ್, ದುಗ್ಗಪ್ಪಗೌಡ, ಅಗ್ನಿ ಶಿವಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.