ADVERTISEMENT

ಸರ್ಕಾರಕ್ಕೆ ಮತ್ತೆ ಮುಜುಗರ ತಂದ ವಿಧಾನ ಪರಿಷತ್ ಸದಸ್ಯ ಎಚ್‌. ವಿಶ್ವನಾಥ್

ಎನ್‌ಇಪಿ ಕಾರ್ಯಪಡೆಯ ಅಧ್ಯಕ್ಷ ಸ್ಥಾನದಿಂದ ರಂಗನಾಥ್‌ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 19:31 IST
Last Updated 7 ಡಿಸೆಂಬರ್ 2020, 19:31 IST
ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್
ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್   

ಬೆಂಗಳೂರು: ‘ರಾಜ್ಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕಾಗಿ ರಚಿಸಿರುವ ಕಾರ್ಯಪಡೆಯ ಅಧ್ಯಕ್ಷ ಸ್ಥಾನದಿಂದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್‌.ವಿ.ರಂಗನಾಥ್ ಅವರನ್ನು ವಜಾಗೊಳಿಸಬೇಕು’ ಎಂದು ಪಟ್ಟು ಹಿಡಿಯುವ ಮೂಲಕ ಆಡಳಿತಾರೂಢ ಬಿಜೆಪಿಗೆ ಅದೇ ‍ಪಕ್ಷದ ಸದಸ್ಯ ಎಚ್‌.ವಿಶ್ವನಾಥ್‌ ಮತ್ತೊಮ್ಮೆ ಮುಜುಗರ ತಂದ ಪ್ರಸಂಗ ಪರಿಷತ್ತಿನಲ್ಲಿ ನಡೆಯಿತು.

ನೀತಿಯ ಕುರಿತು ವಿಧಾನ ಪರಿಷತ್‌ನಲ್ಲಿ ಸೋಮವಾರ ಚರ್ಚೆ ನಡೆಯುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ವಿಶ್ವನಾಥ್‌, ‘ರಂಗನಾಥ್‌ ಅವರು ಆರ್ಥಿಕ ಅಪರಾಧ ಆರೋಪ ಎದುರಿಸುತ್ತಿರುವ ಕಾಫಿ ಡೇ ಕಂಪನಿಯ ಅಧ್ಯಕ್ಷರಾಗಿದ್ದಾರೆ. ಆ ಕಂಪನಿಯ ಆಡಳಿತ ವ್ಯವಸ್ಥಾಪಕರಾಗಿದ್ದ ವಿ.ಜಿ.ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾರ್ಯಪಡೆಗೆ ರಂಗನಾಥ್‌ ಅವರ ನೇಮಕ ನೀತಿಯಲ್ಲಿರುವ ಆಶಯಗಳಿಗೆ ವಿರುದ್ಧವಾಗಿದೆ’ ಎಂದರು.

ವಿಶ್ವನಾಥ್‌ ಅವರ ವಾದವನ್ನು ನಿರಾಕರಿಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ರಂಗನಾಥ್‌ ಅವರನ್ನು ನೇಮಿಸಿದ ಸರ್ಕಾರದ ತೀರ್ಮಾನವನ್ನು ಸಮರ್ಥಿಸಿದರು. ‘ರಂಗನಾಥ್‌ ವಿರುದ್ಧ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಅವರ ಸೇವೆ ಪರಿಗಣಿಸಿ ಉನ್ನತ ಶಿಕ್ಷಣ ಪರಿಷತ್‌ಗೆ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ’ ಎಂದರು.

ADVERTISEMENT

ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿಶ್ವನಾಥ್‌, ‘ಹಾಗಿದ್ದರೆ ಸಚಿವರು (ಅಶ್ವತ್ಥನಾರಾಯಣ) ಹೊಸ ನೀತಿಯನ್ನು ಸರಿಯಾಗಿ ಓದಿಲ್ಲ ಅನಿಸುತ್ತಿದೆ’ ಎಂದರು.

ಅದಕ್ಕೂ ಮೊದಲು ಮಾತನಾಡಿದ ಬಿಜೆಪಿ ಸದಸ್ಯ ಎಸ್‌.ವಿ. ಸಂಕನೂರು, ‘ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರುವ ಮೊದಲು, ಅದರ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಚರ್ಚೆ, ಸಂವಾದಗಳನ್ನು ಏರ್ಪಡಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.