ADVERTISEMENT

ರಾಜೀನಾಮೆ ಒಪ್ಪದಿದ್ದರೆ ಶಾಸಕ ಸ್ಥಾನವೂ ಬೇಡ: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 18:45 IST
Last Updated 20 ಜೂನ್ 2019, 18:45 IST
   

ಬೆಂಗಳೂರು:ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕರಿಸದಿದ್ದರೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹುಣಸೂರು ಕ್ಷೇತ್ರದ ಶಾಸಕ ಎಚ್.ವಿಶ್ವನಾಥ್ ಇಲ್ಲಿ ಗುರುವಾರ ಬೆದರಿಕೆ ಹಾಕಿದ್ದಾರೆ.

ಈಚೆಗಷ್ಟೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಮಾಡಿ ಚರ್ಚಿಸಿದ್ದು, ರಾಜೀನಾಮೆ ಅಂಗೀಕರಿಸುವಂತೆ ಕೋರಿದ್ದರು. ಗೌಡರು ಮನವೊಲಿಸುವ ಪ್ರಯತ್ನ ನಡೆಸಿದ್ದರೂ, ಅದಕ್ಕೆ ಒಪ್ಪಿರಲಿಲ್ಲ ಎನ್ನಲಾಗಿದೆ.

ಅಧ್ಯಕ್ಷ ಸ್ಥಾನಕ್ಕೂ ಪತ್ರಿಕಾಗೋಷ್ಠಿಯಲ್ಲೇ ರಾಜೀನಾಮೆ ಪ್ರಕಟಿಸಿದ್ದು, ಈಗ ಅಂಗೀಕಾರಕ್ಕೆ ಒತ್ತಾಯಿಸಲೂ ಮಾಧ್ಯಮಗೋಷ್ಠಿ ಬಳಸಿಕೊಂಡಿದ್ದು ವಿಶೇಷ. ರಾಜೀನಾಮೆ ಒಪ್ಪದಿದ್ದರೆ ಶಾಸಕ ಸ್ಥಾನವೂ ಬೇಡ ಎಂದು ಬೇಸರದಿಂದಲೇ ಹೇಳುವ ಮೂಲಕ ಜೆಡಿಎಸ್‌ನಿಂದ ದೂರ ಸರಿಯುವ ಸೂಚನೆ ನೀಡಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ.

ADVERTISEMENT

‘ನನ್ನ ಅನುಭವವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಬಳಸಿಕೊಳ್ಳಲಿಲ್ಲ.ಒಬ್ಬ ನಾಯಕನನ್ನು ರಾಜಕೀಯವಾಗಿ ಕೊಲ್ಲುವುದು ಒಳ್ಳೆಯದಲ್ಲ. ಮುಖ್ಯಮಂತ್ರಿ ಜತೆ ಕೆಲಸ ಮಾಡಬೇಕೆಂಬ ಆಸೆ ಇತ್ತು. ಆದರೆ ಸನ್ನಿವೇಶ ಅದಕ್ಕೆ ಆಸ್ಪದ ಕೊಟ್ಟಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಯಾರ ಮನೆಯ ಬಾಗಿಲನ್ನೂ ತಟ್ಟುವುದಿಲ್ಲ’ ಎಂದು ತಿಳಿಸಿದರು.

ಜೆಡಿಎಸ್ ಹಿತದೃಷ್ಟಿಯಿಂದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಹಿಸುವುದು ಒಳ್ಳೆಯದು. ಜೆಡಿಎಸ್‌ನಲ್ಲಿ ಖಾಲಿ ಇರುವ ಸಚಿವ ಸ್ಥಾನ ಭರ್ತಿಮಾಡಬೇಕು. ಸಮಾಜದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಶಿಕ್ಷಣ ಇಲಾಖೆಗೆ ಸಚಿವರು ಇಲ್ಲದಿರುವುದು ನೋವಿನ ಸಂಗತಿ. ಹೊಸದಾಗಿ ಸಚಿವರಾಗಿರುವ ಇಬ್ಬರಿಗೂ ಖಾತೆ ಹಂಚಿಕೆ ಮಾಡಬೇಕು. ಖಾತೆ ವಹಿಸಿದೆ ಆ ಸಮುದಾಯಕ್ಕೆ ನೋವುಂಟು ಮಾಡಬಾರದು ಎಂದರು.

ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರಿಸಿದ್ದು, ಸಮನ್ವಯ ಸಮಿತಿಗೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ನೀಡದಿರುವುದಕ್ಕೆ ಕಿಡಿ ಕಾರಿದರು. ‘ಸಮನ್ವಯದ ಅರ್ಥವೇ ಗೊತ್ತಿಲ್ಲದವರು ಯಾವ ಸೀಮೆ ಅಧ್ಯಕ್ಷರು’ ಎಂದು ಗುಡುಗಿದರು. ‘ಅಹಿಂದ ನಾಯಕ ಎಂದು ಕರೆಸಿಕೊಂಡು ಅಲ್ಪಸಂಖ್ಯಾತ ಸಮುದಾಯದ ಮುಖಂಡ ರೋಷನ್ ಬೇಗ್ ಅವರನ್ನು ಕಾಂಗ್ರೆಸ್‌ನಿಂದ ಅಮಾನತು ಮಾಡಿಸಿದ್ದಾರೆ. ನಾನು ಪಕ್ಷದಲ್ಲಿ ಇದಿದ್ದರೆ ನನ್ನ ಕತೆಯೂ ಇದಕ್ಕಿಂತ ಬೇರೆ ಆಗುತ್ತಿರಲಿಲ್ಲ’ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.