ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಎಚ್‌.ವಿಶ್ವನಾಥ್‌ ವಿರೋಧ–ಸರ್ಕಾರದ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 9:02 IST
Last Updated 29 ಜೂನ್ 2021, 9:02 IST
ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌
ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌    

ಮೈಸೂರು: ‘ರಾಜ್ಯ ಸರ್ಕಾರವು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವ ಮೂಲಕ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ. ಇದು ಮಗುವನ್ನು ಮರೆತ ಸರ್ಕಾರ’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಮಂಗಳವಾರ ಇಲ್ಲಿ ವಾಗ್ದಾಳಿ ನಡೆಸಿದರು.

‘ಕೋವಿಡ್‌ ಮೂರನೇ ಅಲೆ ಹಾಗೂ ಡೆಲ್ಟಾ ಪ್ಲಸ್‌ ರೂಪಾಂತರಿ ವೈರಾಣುವಿನ ಆತಂಕ ಎದುರಾಗಿದೆ. ಇಂಥ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ಇವರಿಗೆ ಸಲಹೆ ನೀಡಿದವರು ಯಾರು? ಪರೀಕ್ಷೆ ನಡೆಸಲು ಏಕಿಷ್ಟು ಆತುರ? ಮಗುವನ್ನು ನಾಡಿನ ಆಸ್ತಿ ಎನ್ನುತ್ತೇವೆ. ಆದರೆ, ಅಂಥ ಮಕ್ಕಳ ಮೇಲೆ ಈ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

‘ಮನುಷ್ಯನ ಸಾವನ್ನು ಈ ಸರ್ಕಾರ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈಗ ಮಕ್ಕಳ ಜೀವದ ಜೊತೆ ಆಟವಾಡುತ್ತಿದೆ. ಮಕ್ಕಳು, ಶಿಕ್ಷಕರು ಹಾಗೂ ಪೋಷಕರನ್ನೂ ಸಾಯಿಸಲು ಹೊರಟಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯನ್ನು ಕೇಂದ್ರ ಸರ್ಕಾರವೇ ರದ್ದು ಮಾಡಿದೆ. ಹಲವು ರಾಜ್ಯಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನೂ ರದ್ದು ಮಾಡಿವೆ. ಇಂಥ ಕಠಿಣ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿರುವುದೇ ಅವೈಜ್ಞಾನಿಕ. ಪಾಠ ಮಾಡದೆ ಪರೀಕ್ಷೆ ನಡೆಸುತ್ತಿರುವುದು ಜಗತ್ತಿನಲ್ಲಿ ಇದೇ ಮೊದಲು’ ಎಂದು ವ್ಯಂಗ್ಯವಾಡಿದರು.

‘ಯಾವ ಹಾಗೂ ಯಾರ ಹಟಕ್ಕಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಪರೀಕ್ಷೆ ನಡೆಸುತ್ತಿದ್ದಾರೋ ಗೊತ್ತಿಲ್ಲ. ಮಾಜಿ ಶಿಕ್ಷಣ ಸಚಿವರ ಸಲಹೆಯನ್ನೂ ಕೋರಿಲ್ಲ. ಆರೋಗ್ಯ ಸಚಿವರ ಗಮನಕ್ಕೂ ತಂದಿಲ್ಲ. ತಮಗೇ ಎಲ್ಲಾ ಗೊತ್ತು ಎಂಬ ಅಹಂ ಸುರೇಶ್‌ ಕುಮಾರ್ ಅವರಲ್ಲಿದೆ. ಸರ್ಕಾರ ನಡೆಸುವವರಿಗೆ ಬುದ್ಧಿ ಇದ್ದರೆ ಈ ಶಿಕ್ಷಣ ಸಚಿವರನ್ನು ಬದಲಾಯಿಸಬೇಕು’ ಎಂದರು.

‘ಶಿಕ್ಷಣ ಇಲಾಖೆ ಎಂಬುದು ಮಾರುಕಟ್ಟೆ ಅಲ್ಲ. ಇದು 8.5 ಲಕ್ಷ ಮಕ್ಕಳ ಜೀವದ ಪ್ರಶ್ನೆ. ಅವರಲ್ಲಿ ಸುಮಾರು 2,300 ಮಕ್ಕಳು ಅಂಗವಿಕಲರಿದ್ದಾರೆ. ಹೀಗಾಗಿ, ಕೂಡಲೇ ಪರೀಕ್ಷೆ ನಡೆಸುವ ತೀರ್ಮಾನದಿಂದ ಹಿಂದೆ ಸರಿಯಬೇಕು’ ಎಂದು ಆಗ್ರಹಿಸಿದರು.

‘ಡಾ.ದೇವಿಶೆಟ್ಟಿ ಅವರೇ ಮೂರನೇ ಅಲೆ ಬರುತ್ತದೆ ಎನ್ನುತ್ತಿದ್ದಾರೆ. ಆದರೆ, ಶಾಲೆ ತೆರೆಯಬಹುದು, ಪರೀಕ್ಷೆ ಮಾಡಬಹುದು ಎಂಬ ಸಲಹೆ ನೀಡುತ್ತಿದ್ದಾರೆ. ಏಕೆ ಎರಡೂ ರೀತಿಯ ಸಲಹೆ ನೀಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.