ADVERTISEMENT

4ಜಿ ವಿನಾಯಿತಿ | ₹15 ಸಾವಿರ ಕೋಟಿ ನಷ್ಟ: ವಿಶ್ವನಾಥ್ ಆರೋಪ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 19:30 IST
Last Updated 8 ಮಾರ್ಚ್ 2023, 19:30 IST
ಎ.ಎಚ್. ವಿಶ್ವನಾಥ್‌
ಎ.ಎಚ್. ವಿಶ್ವನಾಥ್‌   

ಬೆಂಗಳೂರು: ‘ಕಳೆದ ಐದು ವರ್ಷದಲ್ಲಿ ₹15 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ 4ಜಿ ವಿನಾಯಿತಿ (ಟೆಂಡರ್‌ ಇಲ್ಲದೇ ಗುತ್ತಿಗೆ) ನೀಡಲಾಗಿದೆ. 40 ಸಾವಿರ ಟೆಂಡರ್‌ಗಳನ್ನು ಕರೆಯಲಾಗಿದ್ದು, ಕೆಲಸವೇ ನಡೆದಿಲ್ಲ. ಇದರಿಂದ ಬೊಕ್ಕಸಕ್ಕೆ ₹15 ಸಾವಿರ ಕೋಟಿ ನಷ್ಟವಾಗಿದೆ’ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎ.ಎಚ್. ವಿಶ್ವನಾಥ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ₹5 ಲಕ್ಷದೊಳಗಿನ ಮೊತ್ತದ ಕಾಮಗಾರಿಗಳಿಗೆ 4ಜಿ ವಿನಾಯಿತಿ ನೀಡಿದ್ದು ಇದೊಂದು ದೊಡ್ಡ ದೋಖಾ ಎಂದು ಹೇಳಿದರು.

‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಲಂಚ ಪ್ರಕರಣದ ಮೊದಲನೇ ಆರೋಪಿಯಾಗಿರುವ ಚನ್ನಗಿರಿಯ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಇಷ್ಟು ದಿನ ಸರ್ಕಾರವೇ ಆಶ್ರಯ ನೀಡಿತ್ತು’ ಎಂದು ಅವರು ಹರಿಹಾಯ್ದರು.

ADVERTISEMENT

ಕೆಎಸ್‌ಡಿಎಲ್‌ ಗುತ್ತಿಗೆ ಸಂಬಂಧದ ಪ್ರಕರಣದಲ್ಲಿ ಮಾಡಾಳ್‌ ವಿರೂಪಾಕ್ಷಪ್ಪನವರಿಗೆ ಕೋರ್ಟ್‌ ತುರ್ತಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ವಿರೂಪಾಕ್ಷಪ್ಪ ಮಾಡಾಳ್‌ನಲ್ಲಿದ್ದರೆ, ನಮ್ಮ ಪೊಲೀಸರು ಬೆಂಗಳೂರಿನಲ್ಲಿ ಹುಡುಕಾಟ ನಡೆಸಿದರು. ಯಾರು ಎಲ್ಲಿದ್ದಾರೆ ಎಂಬುದು ಪೊಲೀಸರಿಗೆ ಗೊತ್ತಿದೆ. ಆದರೆ ಬಂಧಿಸುವುದಕ್ಕೆ ಆಗಲಿಲ್ಲ. ನಿಮ್ಮ ಅಪರಾಧ ಚಟುವಟಿಕೆಗಳಿಂದ ಬಿಜೆಪಿ ಮತ್ತು ಸರ್ಕಾರದ ಮಾನ ಹಾರಾಜು ಹಾಕಬೇಡಿ’ ಎಂದು ಹೇಳಿದರು.

‘ರಾಜ್ಯ ಬಿಜೆಪಿಯ ಕೆಲ ಮುಖಂಡರು ಮೋದಿಯವರ ತತ್ವ–ಸಿದ್ಧಾಂತಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬಿಜೆಪಿ ರಾಜ್ಯ ಘಟಕ ಮತ್ತು ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರೋಧಿಯಾಗಿದೆ’ ಎಂದರು.

‘ನ್ಯಾಯಾಲಯ, ಅಧಿಕಾರಶಾಹಿ ಮತ್ತು ಸರ್ಕಾರಗಳ ಮೇಲೆಯೂ ಸಾರ್ವಜನಿಕರ ನಿರೀಕ್ಷೆಗಳು ಹುಸಿಯಾಗುತ್ತಿವೆ’ ಎಂದರು.

‘ಎಲ್ಲ ನಿಗಮಗಳಲ್ಲೂ ಲೂಟಿ’
‘ರಾಜ್ಯದಲ್ಲಿರುವ ನಿಗಮ ಮಂಡಳಿಗಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡಲಾಗುತ್ತದೆ. ಆದರೆ, ಅವುಗಳಿಗೆ ಲಂಗು–ಲಗಾಮಿಲ್ಲ, ವಾರ್ಷಿಕ ಲೆಕ್ಕಪತ್ರಗಳಿಲ್ಲ. ವೆಬ್‌ಸೈಟ್‌ಗಳಲ್ಲೂ ಅಪ್‌ಡೇಟ್‌ ಮಾಡುತ್ತಿಲ್ಲ. ಈ ನಿಗಮ–ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕರಾಗಲು ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳು ₹5 ಕೋಟಿಯಿಂದ ₹10 ಕೋಟಿ ಹಣ ನೀಡಿರುತ್ತಾರೆ. 30–35 ವರ್ಷದ ಅವಧಿಯಲ್ಲಿ ಇಲ್ಲಿ ಲೂಟಿ ಮಾಡುವುದೇ ಅವರ ಕೆಲಸ’ ಎಂದು ವಿಶ್ವನಾಥ್ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.