ADVERTISEMENT

ಎಚ್‌3ಎನ್‌2 ವೈರಾಣು: ತಜ್ಞರ ಜತೆ ಸಭೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 16:19 IST
Last Updated 5 ಮಾರ್ಚ್ 2023, 16:19 IST
ಡಾ.ಕೆ. ಸುಧಾಕರ್
ಡಾ.ಕೆ. ಸುಧಾಕರ್   

ಬೆಂಗಳೂರು: ‘ದೇಶದ ವಿವಿಧೆಡೆ ನಿರಂತರ ಕೆಮ್ಮು– ಜ್ವರಕ್ಕೆ ಕಾರಣವಾಗಿರುವ ಎಚ್‌3ಎನ್‌2 ವೈರಾಣು ರಾಜ್ಯದಲ್ಲಿ ಇದುವರೆಗೂ ಪತ್ತೆಯಾಗಿಲ್ಲ. ಈ ವೈರಾಣು ತಡೆಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಜ್ಞರ ಜತೆಗೆ ಸೋಮವಾರ ಸಭೆ ನಡೆಸಲಾಗುವುದು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಇಲಾಖೆಯು ವಿಧಾನಸೌಧದಿಂದ ಆರೋಗ್ಯಸೌಧದವರೆಗೆ ಹಮ್ಮಿಕೊಂಡ ಸೈಕ್ಲೋಥಾನ್‌ಗೆ ಚಾಲನೆ ನೀಡಿ, ಮಾತನಾಡಿದರು.

‘ಎಚ್‌3ಎನ್‌2 ವೈರಾಣುವಿನಿಂದ ದೀರ್ಘಕಾಲ ಕೆಮ್ಮು ಇರಲಿದೆ ಎಂಬ ಮಾಹಿತಿಯಿದೆ. ವೈರಾಣುವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. ರಾಜ್ಯದಲ್ಲಿ ಕೈಗೊಳ್ಳಬೇಕಾದ ಹೆಚ್ಚುವರಿ ಕ್ರಮದ ಬಗ್ಗೆ ತಜ್ಞರು ಹಾಗೂ ಇಲಾಖೆಯ ಅಧಿಕಾರಿಗಳ ಜತೆಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಒಂದು ವೇಳೆ ಈ ವೈರಾಣು ಪತ್ತೆಯಾದರೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹೇಗಿರಬೇಕು ಎಂಬ ಬಗ್ಗೆಯೂ ಸಭೆಯ ನಂತರ ಪ್ರಕಟಿಸಲಾಗುವುದು’ ಎಂದು ಹೇಳಿದರು.

ADVERTISEMENT

‘ಎಚ್‌3ಎನ್‌2 ವೈರಾಣುವಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ನೀಡಲು ತಾಂತ್ರಿಕ ಸಲಹಾ ಸಮಿತಿಗೆ ತಿಳಿಸಲಾಗಿದೆ. ಸೋಮವಾರ ಸಂಜೆಯೊಳಗೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಸರ್ಕಾರದ ಅನುಮೋದನೆ ಬಳಿಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುು’ ಎಂದು ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದರು.

‘ಎಚ್‌3ಎನ್‌2 ವೈರಾಣು ಕೋವಿಡ್‌ನಂತೆಯೇ ರೋಗ ಲಕ್ಷಣ ಹೊಂದಿದೆ. ಆದ್ದರಿಂದ ವೈರಾಣುವಿನ ಬಗ್ಗೆ ಅಧ್ಯಯನ ನಡೆಸಬೇಕು’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಸುದರ್ಶನ್ ಹೇಳಿದರು.

ವಾರದಿಂದ ಬೆಂಗಳೂರಿನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯೂ ಕೊಂಚ ಏರಿಕೆಯಾಗಿದೆ. ಶನಿವಾರ ಬೆಂಗಳೂರಿನಲ್ಲಿ 79 ಸೇರಿ ರಾಜ್ಯದಲ್ಲಿ 95 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದವು. ಭಾನುವಾರ 64 ಪ್ರಕರಣಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿಯೇ 50 ಪ್ರಕರಣಗಳು ದೃಢಪಟ್ಟಿವೆ. ಫೆಬ್ರವರಿ ತಿಂಗಳ ಬಹುತೇಕ ದಿನ ದೈನಂದಿನ ಪ್ರಕರಣಗಳ ಸಂಖ್ಯೆ 50ರ ಗಡಿಯೊಳಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.