ADVERTISEMENT

ಶ್ರೀಕಿಗೆ ಕಾಂಗ್ರೆಸ್‌ನಿಂದಲೇ ಅಪಾಯ: ಜ್ಞಾನೇಂದ್ರ ಸಂಶಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 15:11 IST
Last Updated 16 ನವೆಂಬರ್ 2021, 15:11 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ಬೆಂಗಳೂರು: ‘ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಗೆ ಪ್ರಾಣ ಬೆದರಿಕೆ ಇದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಅವರಿಂದಲೇ ಆತನಿಗೆ ಅಪಾಯವಿರಬಹುದು ಎಂಬ ಅನುಮಾನ ಕಾಡುತ್ತಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಹಲವರು ಶ್ರೀಕಿಗೆ ಪ್ರಾಣ ಭಯವಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರೇ ಏನಾದರೂ ಮಾಡಿ ಸರ್ಕಾರದ ಮೇಲೆ ಹಾಕುತ್ತಾರಾ ಎಂಬ ಅನುಮಾನ ಮೂಡುತ್ತಿದೆ. ಶ್ರೀಕಿಗೆ ಪ್ರಾಣ ಭಯವಿದೆ ಎಂಬ ಆರೋಪದ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬಿಟ್‌ಕಾಯಿನ್‌ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕಾಂಗ್ರೆಸ್‌ನವರು ಒಂದೇ ಸುಳ್ಳನ್ನು ಪದೇ ಪದೇ ಹೇಳುವ ಮೂಲಕ ಸತ್ಯ ಎಂದು ನಂಬಿಸಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಶ್ರೀಕೃಷ್ಣನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆಗ, ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಈಗ ರಾಜಕೀಯಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ಶ್ರೀಕೃಷ್ಣನನ್ನು ಬಂಧಿಸದೇ ಬಿಟ್ಟು ಕಳುಹಿಸಿದ್ದರು. ನಾವು ಅವನನ್ನು ಬಂಧಿಸಿ, ತನಿಖೆ ನಡೆಸಿದ್ದೇವೆ. ಸಮರ್ಪಕವಾಗಿ ತನಿಖೆ ನಡೆಸಿ, ಇಂಟರ್‌ಪೋಲ್‌ಗೂ ಮಾಹಿತಿ ನೀಡಲಾಗಿದೆ. ಏನೋ ನಡೆದಿದೆ ಎಂದು ಕಾಂಗ್ರೆಸ್‌ನವರು ವದಂತಿ ಹಬ್ಬಿಸುತ್ತಿದ್ದಾರೆ. ಶ್ರೀಕಿ ಜತೆಗೆ ಕಾಂಗ್ರೆಸ್‌ನವರ ಮಕ್ಕಳಿಗೆ ಯಾವ ರೀತಿಯ ವ್ಯವಹಾರದ ನಂಟು ಇತ್ತು ಎಂಬುದನ್ನು ಹೇಳಲಿ’ ಎಂದು ಜ್ಞಾನೇಂದ್ರ ಸವಾಲು ಹಾಕಿದರು.

ಮತಾಂತರ ನಿಷೇಧಕ್ಕೆ ಕಾಯ್ದೆ: ‘ವಿವಿಧ ರಾಜ್ಯಗಳು ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಗಳ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಧಾರ್ಮಿಕ ಮುಖಂಡರ ಜತೆಗೂ ಸಮಾಲೋಚನೆ ನಡೆಸಲಾಗುವುದು. ಯಾವುದೇ ರೀತಿಯ ಪೂರ್ವಗ್ರಹ ಇಲ್ಲದೆ, ಪ್ರಬಲವಾದ ಕಾಯ್ದೆಯೊಂದನ್ನು ಜಾರಿಗೊಳಿಸಲಾಗುವುದು’ ಎಂದರು.

‘ಅಪಾಯವಿದ್ದರೆ ರಕ್ಷಣೆ ಕೊಡಲಿ’

‘ಹ್ಯಾಕರ್‌ ಶ್ರೀಕೃಷ್ಣನ ಜೀವಕ್ಕೆ ಅಪಾಯವಿದೆ ಎಂಬುದು ಕಾಂಗ್ರೆಸ್‌ನವರಿಗೆ ಹೇಗೆ ತಿಳಿಯಿತೋ ಗೊತ್ತಿಲ್ಲ. ಆತನ ಜೀವಕ್ಕೆ ಬೆದರಿಕೆ ಇದ್ದರೆ ಸರ್ಕಾರ ರಕ್ಷಣೆ ನೀಡಲಿ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇಷ್ಟು ವರ್ಷ ಆತನ ಜೀವಕ್ಕೆಅಪಾಯವಿರಲಿಲ್ಲ. ಈಗ ಅವನಿಗೆ ಜೀವ ಬೆದರಿಕೆ ಇದೆ ಎಂದರೆ ಹೇಗೆ? ಈ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ನಿಖರ ಮಾಹಿತಿ ಇರಬಹುದು’ ಎಂದರು.

ಬಿಟ್‌ಕಾಯಿನ್‌ ವಿಚಾರದಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ತನಿಖೆಯನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಯಾರ ಬಳಿಯೂ ಖಚಿತ ಮಾಹಿತಿ ಇಲ್ಲ. ಸರ್ಕಾರ ತಜ್ಞರ ಸಲಹೆ ಪಡೆದು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.