ADVERTISEMENT

ಹಲಾಲ್‌ ನಿಷೇಧ: ಖಾಸಗಿ ಮಸೂದೆ

ಇದೇ 19ರಿಂದ ಬೆಳಗಾವಿಯಲ್ಲಿ ಅಧಿವೇಶನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2022, 18:50 IST
Last Updated 14 ಡಿಸೆಂಬರ್ 2022, 18:50 IST
ಎನ್.ರವಿಕುಮಾರ್
ಎನ್.ರವಿಕುಮಾರ್   

ಬೆಂಗಳೂರು: ‘ಹಲಾಲ್‌’ ಲೇಬಲ್‌ ಹಾಕಿದ ದಿನಸಿ, ಆಹಾರ ಪದಾರ್ಥಗಳ ಮಾರಾಟವನ್ನು ರಾಜ್ಯದಲ್ಲಿ ನಿಷೇಧಿಸಲು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಖಾಸಗಿ ಮಸೂದೆ ಮಂಡಿಸಲಿದ್ದಾರೆ.

ಈ ಸಂಬಂಧ ಅವರು ವಿಧಾನಪರಿಷತ್‌ನ ಹಂಗಾಮಿ ಸಭಾಪತಿಯವರಿಗೆಬುಧವಾರ ನೋಟಿಸ್‌ ನೀಡಿದ್ದಾರೆ. ‘ಆಹಾರ ಪದಾರ್ಥಗಳ ಮೇಲೆ ‘ಹಲಾಲ್‌’ ಲೇಬಲ್‌ ಹಾಕಿ ಮಾರುವುದನ್ನು ನಿಷೇಧಿಸಬೇಕು. ಇದಕ್ಕಾಗಿ ‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ’ಗೆ ಸೂಕ್ತ ತಿದ್ದುಪಡಿ ಅಗತ್ಯವಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಡೆಯಬೇಕಾಗಿದೆ’ ಎಂದು ಹೇಳಿದ್ದಾರೆ.

‘ಹಲಾಲ್‌ ಪ್ರಮಾಣಪತ್ರವನ್ನು ಮುಸ್ಲಿಂ ಧಾರ್ಮಿಕ ಸಂಸ್ಥೆಗಳು ನೀಡುತ್ತವೆ.ಇದಕ್ಕೆ ಸರ್ಕಾರದ ಅನುಮತಿ ಪಡೆದಿಲ್ಲ. ಹೀಗೇ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಯಾವುದೇ ಧಾರ್ಮಿಕ ಸಂಸ್ಥೆಗಳಿಗೂ ನೀಡಿಲ್ಲ. ಎಫ್‌ಎಸ್‌ಎಸ್‌ಎಐ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಗಳೂ ಪ್ರಮಾಣ ಪತ್ರ ನೀಡುವಂತಿಲ್ಲ’ ಎಂದು ಅವರು ನೋಟಿಸ್‌ನಲ್ಲಿ ವಿವರಿಸಿದ್ದಾರೆ.

ADVERTISEMENT

‘ಚಾಕೋಲೆಟ್, ಅಕ್ಕಿ, ಬೇಳೆ ಸೇರಿದಂತೆ ಎಲ್ಲ ದಿನಸಿ ಪದಾರ್ಥಗಳ ಪ್ಯಾಕ್‌ಗಳ ಮೇಲೂ ಹಲಾಲ್‌ ಲೋಗೊ ಹಾಕುವ ಪರಿಪಾಟ ಹೆಚ್ಚಿದೆ. ಪ್ರಮಾಣಪತ್ರವನ್ನು ಅಂಟಿಸುವ ಧಾರ್ಮಿಕ ಸಂಸ್ಥೆಗಳುಕಂಪನಿಗಳಿಂದ ಕೋಟಿಗಟ್ಟಲೆ ಹಣ ವಸೂಲಿ ಮಾಡುತ್ತವೆ, ಅದನ್ನು ಇಸ್ಲಾಂ ಧಾರ್ಮಿಕ ಉದ್ದೇಶಗಳಿಗೆ ಬಳಸುತ್ತಿವೆ. ಇದು ಕಾನೂನು ಬಾಹಿರ‘ ಎಂದು ರವಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

‘ಹಲಾಲ್‌ ಹಾವಳಿ ಯಾವ ಮಟ್ಟಕ್ಕೆ ಮೇರೆ ಮೀರಿದೆ ಎಂದರೆ, ನೆರೆ ರಾಜ್ಯಗಳಲ್ಲಿ ನರ್ಸಿಂಗ್‌ ಹೋಂಗಳು ಮತ್ತು ಖಾಸಗಿ ಆಸ್ಪತ್ರೆಗಳ ಮೇಲೂ ಹಲಾಲ್‌ ಬೋರ್ಡ್‌ ಹಾಕಿ, ಮುಸ್ಲಿಂ ರೋಗಿಗಳನ್ನು ಆಕರ್ಷಿಸಲಾಗುತ್ತಿದೆ. ಕೆಲ ಔಷಧ ಕಂಪನಿಗಳೂ ಹಲಾಲ್‌ ಲೇಬಲ್‌ ಹಾಕಿ ಔಷಧ ಮಾರುತ್ತಿರುವ ಉದಾಹರಣೆಗಳಿವೆ. ದೇಶದಲ್ಲಿ ತಮ್ಮ ಮಾರುಕಟ್ಟೆ ಕುಸಿಯಬಹುದು ಎಂಬ ಭೀತಿಯಿಂದ ದೇಶದೊಳಗೆ ಹಲಾಲ್‌ ಲೇಬಲ್‌ ಹಾಕುವುದಿಲ್ಲ. ರಫ್ತು ಮಾಡುವಾಗ ತಮ್ಮ ಎಲ್ಲ ಉತ್ಪನ್ನಗಳ ಮೇಲೂ ಹಲಾಲ್‌ ಲೇಬಲ್‌ ಹಾಕುತ್ತಿವೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.