ADVERTISEMENT

ಅಂಗವಿಕಲರ ಅಗತ್ಯಗಳಿಗೆ ಇಲಾಖೆ ಸ್ಪಂದಿಸಲಿ

ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 18:25 IST
Last Updated 20 ಏಪ್ರಿಲ್ 2020, 18:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: 'ಲಾಕ್‍ಡೌನ್ ವೇಳೆ ಅಂಗವಿಕಲರ ಆದ್ಯತೆಗಳ ಕೆಲಸ ಮಾಡುವುದು ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕರ್ತವ್ಯ. ಆದರೆ, ರಾಜ್ಯದ ಕೆಲವೆಡೆ ಅಂಗವಿಕಲರು ನೆರವು ಪಡೆಯಲು ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ' ಎಂದು ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿ ಆರೋಪಿಸಿದೆ.

'ಲಾಕ್‍ಡೌನ್ ಇರುವ ಕಾರಣ ವಿಜಯಪುರದಲ್ಲಿ 150 ಅಂಗವಿಲಕರು ನೆರವು ಕೋರಿ ತಹಶೀಲ್ದಾರರನ್ನು ಭೇಟಿಯಾದರು. ಇಲಾಖೆಯಿಂದ ಅಂಗವಿಕಲರ ಪಟ್ಟಿ ಹಾಗೂ ಅಂಗವಿಕಲರ ಕಲ್ಯಾಣ ಅಧಿಕಾರಿಯಿಂದ ಸಹಿ ತರುವಂತೆ ಸೂಚಿಸಲಾಯಿತು. ಆದರೆ, ಲಾಕ್‍ಡೌನ್‍ನಿಂದ ಅಂಗವಿಲಕರ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಬೀಗ ಹಾಕಲಾಗಿತ್ತು.

ಈ ಕುರಿತು ಅಧಿಕಾರಿಯನ್ನು ಶುಕ್ರವಾರ ಸಂಪರ್ಕಿಸಿದಾಗ 'ಲಾಕ್‍ಡೌನ್‍ನಿಂದ ಕಚೇರಿಗೆ ಬೀಗ ಹಾಕಲಾಗಿದೆ. ಅದರ ಬೀಗವೂ ನನ್ನ ಬಳಿ ಇಲ್ಲ' ಎಂದು ತಾತ್ಸಾರವಾಗಿ ಉತ್ತರಿಸಿರುವುದು ಅಮಾನವೀಯ ಸಂಗತಿ' ಎಂದು ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ಬೇಸರ ವ್ಯಕ್ತಪಡಿಸಿದರು.

ADVERTISEMENT

'ಈ ಬಗ್ಗೆ ಸಮಿತಿಗೆ ಕರೆ ಮಾಡಿದ ಅಂಗವಿಕಲರ ಪ್ರತಿನಿಧಿ, ಅಧಿಕಾರಿಯ ಕರ್ತವ್ಯಲೋಪದ ಬಗ್ಗೆ ಅಳಲು ತೋಡಿಕೊಂಡರು. ಲಾಕ್‍ಡೌನ್‍ನಿಂದ ಆಹಾರಕ್ಕೆ ಸಮಸ್ಯೆಯಾಗಿದೆ. ಇರುವ ನೆರವು ಪಡೆಯಲು ಅಧಿಕಾರಿಗಳೇ ಸ್ಪಂದಿಸುತ್ತಿಲ್ಲ‘ ಎಂದು ಮನವಿ ಮಾಡಿಕೊಂಡರು. ಈ ವಿಚಾರವನ್ನು ಇಲಾಖೆ ಮೇಲಧಿಕಾರಿಗಳ ಗಮನಕ್ಕೆ ಬಂದ ನಂತರ ಅಧಿಕಾರಿ ಅಂಗವಿಕಲರ ಪಟ್ಟಿ ಸಿದ್ಧಪಡಿಸಿ ನೀಡಿದ್ದಾರೆ. ಸಾಮಾನ್ಯ ವ್ಯಕ್ತಿಗಳಂತೆ ಅಂಗವಿಲಕರು ಕಚೇರಿಗಳಿಗೆ ಅಲೆದು ನೆರವು ಪಡೆಯುವುದು ಕಷ್ಟವಾಗಿದೆ. ಲಾಕ್‍ಡೌನ್ ಇರುವ ಕಾರಣ ಅಂಗವಿಕಲರ ಮನೆ ಬಾಗಿಲಿಗೆ ಇಲಾಖೆ ಸೇವೆ ನೀಡದೆ, ಕಚೇರಿಗೆ ಬೀಗ ಹಾಕಿರುವುದು ಸರಿಯಲ್ಲ' ಎಂದು ದೂರಿದರು.

'ವಿಜಯಪುರದಲ್ಲಿ ನಡೆದ ಘಟನೆ ಇಲಾಖೆ ನಿರ್ದೇಶಕರ ಗಮನಕ್ಕೆ ಬಂದು, ಫಲಾನುಭವಿಗಳಿಗೆ ಅಗತ್ಯ ನೆರವು ಸಿಗಲು ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲಿನ ಸಮಸ್ಯೆ ಬಗೆಹರಿದಿದೆ' ಎಂದು ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪ ನಿರ್ದೇಶಕಿ ಗೀತಾ ಪಾಟೀಲ 'ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.