ADVERTISEMENT

ಹರಿಹರ: ಇಂದಿನಿಂದ ಹರ ಜಾತ್ರೆ

ವಚನಾನಂದ ಸ್ವಾಮೀಜಿ ತೃತೀಯ ಪೀಠಾರೋಹಣ ಸಮಾರಂಭ ನಾಳೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 18:46 IST
Last Updated 13 ಜನವರಿ 2021, 18:46 IST
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ವಚನಾನಂದ ಸ್ವಾಮೀಜಿ ಅವರು ಬುಧವಾರ ‘ಹರದ್ವಾರ’ಕ್ಕೆ ಕಳಸಾರೋಹಣ ನೆರವೇರಿಸಿದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ವಚನಾನಂದ ಸ್ವಾಮೀಜಿ ಅವರು ಬುಧವಾರ ‘ಹರದ್ವಾರ’ಕ್ಕೆ ಕಳಸಾರೋಹಣ ನೆರವೇರಿಸಿದರು.   

ಹರಿಹರ: ನಗರದ ಹೊರವಲಯದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆವ ರಣವು ಗುರುವಾರದಿಂದ (ಜ.14) ನಡೆಯಲಿರುವ ಎರಡು ದಿನಗಳ ‘ಹರ ಜಾತ್ರೆ’ಗೆ ಸಜ್ಜಾಗಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಸ್ವಾವಲಂಬಿ ಸಮಾವೇಶ, ಸಂಕ್ರಾಂತಿ ಸಂಭ್ರಮ, ಭೂತಪಸ್ವಿ, ಯುವರತ್ನ ಸಮಾವೇಶಗಳು ನಡೆಯಲಿವೆ. ಗುರು ಪೀಠದ ವಚನಾನಂದ ಸ್ವಾಮೀಜಿ ಅವರ ತೃತೀಯ ಪೀಠಾರೋಹಣ ಸಮಾರಂಭ ಶುಕ್ರವಾರ ಮಧ್ಯಾಹ್ನ ನಡೆಯಲಿದೆ. ಪಂಚಮಸಾಲಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿರುವ ‘ಹರ ಜಾತ್ರೆ’ಗೆ ಬುಧವಾರ ಕೊನೆ ಕ್ಷಣದ ಸಿದ್ಧತೆಗಳು ಭರದಿಂದ ನಡೆದವು.

ಗುರುವಾರ ಬೆಳಿಗ್ಗೆ 11.30ಕ್ಕೆ ನಡೆ ಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಹಾ ರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹಾಗೂ ಹಲವು ರಾಜಕೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸೇರಿ ರಾಜ್ಯದ ವಿವಿಧ ಮಠಾಧೀಶರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.

ADVERTISEMENT

ಕಳೆದ ವರ್ಷ ಇದೇ ದಿನದಂದು ನಡೆದ ‘ಹರ ಜಾತ್ರೆ’ಯಲ್ಲಿ ವಚನಾನಂದ ಸ್ವಾಮೀಜಿ, ‘ಪಂಚಮಸಾಲಿ ಸಮುದಾ ಯದ ಪ್ರಶ್ನಾತೀತ ನಾಯಕ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡದಿದ್ದರೆ ನಮ್ಮ ಸಮಾಜ ನಿಮ್ಮ ಕೈಬಿಡುತ್ತದೆ’ ಎಂದು ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದು ವಿವಾದಕ್ಕೀಡಾಗಿತ್ತು. ಒಂದು ವರ್ಷದ ಬಳಿಕ, ಮುರುಗೇಶ ನಿರಾಣಿ ಬುಧವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವುದರಿಂದ ಈ ಬಾರಿಯ ಹರ ಜಾತ್ರೆಗೆ ಮತ್ತಷ್ಟು ಮಹತ್ವ ಬಂದಿದೆ.

25 ಸಾವಿರ ಆಸನ ವ್ಯವಸ್ಥೆ: ಮಠದ ಆವರಣದಲ್ಲಿ 80X32 ಅಡಿ ಅಳತೆಯ ಬೃಹತ್‌ ವೇದಿಕೆ ಸಿದ್ಧಪಡಿಸಲಾಗಿದೆ. 300X400 ಅಡಿಯ ವಿಶಿಷ್ಟ ಮಾದರಿಯ ಜರ್ಮನ್‍ ಟೆಂಟ್‍ ಮಾದರಿ ಪೆಂಡಾಲ್‌ ಹಾಕಲಾಗಿದೆ. ವೇದಿಕೆ ಮೇಲೆ 25 ಗಣ್ಯರು ಆಸೀನರಾಗಬಹುದಾಗಿದೆ. ಸಾರ್ವಜನಿಕರಿಗಾಗಿ 25 ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾತ್ರೆಗೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಪ್ರಸಾದ ವಿತರಣೆಗೆ 10 ಎಕರೆ ಪ್ರದೇಶದಲ್ಲಿ 50 ಕೌಂಟರ್‌ ತೆರೆಯಲಾಗುತ್ತಿದೆ. ಮಠದ ಆವರಣದಲ್ಲಿ ತಾತ್ಕಾಲಿಕವಾಗಿ ಆಸ್ಪತ್ರೆ, ಆಂಬುಲೆನ್ಸ್‌, ರಕ್ತ ಭಂಡಾರ, ಪೊಲೀಸ್‍ ಚೌಕಿ, ಅಗ್ನಿಶಾಮಕ ದಳ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಮಠದ ಸಮೀಪ ಐದು ಕಡೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.