ADVERTISEMENT

ಹರಿಪ್ರಸಾದ್‌–ಆಯನೂರು ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 20:58 IST
Last Updated 17 ಮಾರ್ಚ್ 2021, 20:58 IST
 ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಬೆಂಗಳೂರು: ಪ್ರಶ್ನೆ ಕೇಳುವ ವಿಷಯದಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಮತ್ತು ಕಾಂಗ್ರೆಸ್ ಬಿ.ಕೆ. ಹರಿಪ‍್ರಸಾದ್ ಮಧ್ಯೆ ಜಗಳ ತಾರಕಕ್ಕೇರಿದ ವಿದ್ಯಮಾನಕ್ಕೆ ವಿಧಾನಪರಿಷತ್ ಸಾಕ್ಷಿಯಾಯಿತು.

ರಾಜ್ಯದಲ್ಲಿ ಇನ್ನೂ ಜೀವಂತವಾಗಿರುವ ಮಲ ಹೊರುವ ಪದ್ಧತಿ ಕುರಿತು ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿಹರಿಪ್ರಸಾದ್‌ ಮಾತನಾಡುತ್ತಿದ್ದ ವೇಳೆ, 'ಚರ್ಚೆ ಬೇಡ ನೀವು ಸಚಿವರಿಗೆ ಪ್ರಶ್ನೆ ಕೇಳಿ" ಎಂದು ಸಭಾಪತಿ ಸ್ಥಾನದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಸಲಹೆ ನೀಡಿದರು.

ಆಗ, ‘ನಾನು ಅದನ್ನೇ ಮಾಡುತ್ತಿದ್ದೇನೆ. ನೀವು ಮಧ್ಯಪ್ರವೇಶಿಸಬೇಡಿ’ ಎಂದು ಹರಿಪ್ರಸಾದ್ ಹೇಳಿದ ಮಾತು ಗದ್ದಲಕ್ಕೆ ಕಾರಣವಾಯಿತು.

ADVERTISEMENT

‘ಯಾರು ಕೂಡ ಪೀಠವನ್ನು ಗದರಿಸುವ ಮತ್ತು ಪೀಠದಲ್ಲಿರುವವರ ಮಾತಿಗೆ ಮಧ್ಯಪ್ರವೇಶ ಮಾಡುವ ಹಾಗಿಲ್ಲ. ಹಾಗೆ ಮಾಡಿದರೆ ಪೀಠಕ್ಕೆ ಮಾಡಿದ ಅಗೌರವ. ಅದಕ್ಕೆತಕ್ಕ ಕ್ರಮ ಕೈಗೊಳ್ಳಬೇಕು’ ಎಂದು ಆಯನೂರು ಮಂಜುನಾಥ್ ಹೇಳಿದರು. ಆಗ ಕೆರಳಿದ ಹರಿಪ್ರಸಾದ್‌ ಮತ್ತು ಕಾಂಗ್ರೆಸ್ಸಿನ ಇತರ ಸದಸ್ಯರು, ‘ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆ ಬೇಡ ಎಂದು ನಮಗೆ ಹೇಳಿ ಆಯನೂರ್‌ಗೆ ಅವಕಾಶ ನೀಡಿದ್ದೀರಿ, ಇದು ತಾರತಮ್ಯ’ ಎಂದು ಅಸಮಾಧಾನ ಹೊರಹಾಕಿದರು.

‘ನೈತಿಕತೆ ಪಾಠ ಮಾಡುವವರು ನಾಲ್ಕು ನಾಲ್ಕು ಪಕ್ಷ ಬದಲಾವಣೆ ಮಾಡಿದ್ದಾರೆ. ಅವರಿಂದ ನಾವು ಕಲಿಯಬೇಕಿಲ್ಲ’ ಎಂದು ಹರಿಪ್ರಸಾದ್ ಹೇಳಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಆಯನೂರು ಮಂಜುನಾಥ್, ‘ಯಾರೋ ರೌಡಿಗಳಿಗೆ ಹೆದರಲ್ಲ, ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ, ಚಮಚಾಗಿರಿ ಮಾಡಿ ಬಂದಿಲ್ಲ. ಒಂದು‌ ಚುನಾವಣೆ ಗೆಲ್ಲಲು ಯೋಗ್ಯತೆ ಇಲ್ಲ’ ಎಂದು ಹರಿಹಾಯ್ದರು. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಸಂಘರ್ಷ ನಡೆಯಿತು. ಸಭಾಪತಿ ಪೀಠದಲ್ಲಿದ್ದ ಪ್ರಾಣೇಶ್, ‘ಚರ್ಚೆಗೆ ಅವಕಾಶ ಇಲ್ಲ’ ಎಂದು ಗಟ್ಟಿಧ್ವನಿಯಲ್ಲಿ ಪರಿಸ್ಥಿತಿ ತಿಳಿಗೊಳಿಸಿದರು.

ಬಳಿಕ, ‘ಅಸಾಂವಿಧಾನಿಕ ಪದ ಕಡತದಿಂದ ತೆಗೆಯಬೇಕು’ ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಪಟ್ಟುಹಿಡಿದರು. ಇದಕ್ಕೆ ಸಮ್ಮತಿಸಿದ ಪ್ರಾಣೇಶ್, ಅಸಂಬದ್ಧ ಪದ ಇದ್ದರೆ ಕಡತದಿಂದ ತೆಗೆಯಲು ಸೂಚಿಸಿದರು. ಆದರೆ, ಇದಕ್ಕೆ ಅಸಮಾಧಾನ ವ್ಯಕ್ತಪಡಿದ ಆಯನೂರು, ‘ಅಸಾಂವಿಧಾನಿಕ ಪದ ಇದ್ದರೆ ಮಾತ್ರ ವಾಪಸ್ ಪಡೆಯಬೇಕು, ನನ್ನ ಪದಗಳಿಗೆ ನಾನು ಜವಾಬ್ದಾರ. ಅದು ನನ್ನ ಹಕ್ಕು’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.