ADVERTISEMENT

ನಿರರ್ಥಕ ದಾವೆ ತಿರಸ್ಕರಿಸಲು ಕೋರಿಕೆ

ಶಾಸಕ ಹ್ಯಾರಿಸ್‌ ವಿರುದ್ಧದ ಚುನಾವಣಾ ತಕರಾರು ಅರ್ಜಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 16:31 IST
Last Updated 25 ಜನವರಿ 2024, 16:31 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ‘ಅಸಮರ್ಪಕ ನಾಮಪತ್ರ ಸ್ವೀಕರಿಸಿದ ಕಾರಣ ಅದು ಪ್ರತಿಸ್ಪರ್ಧಿಯ ಗೆಲುವಿಗೆ ಅಡ್ಡಿ ಉಂಟು ಮಾಡಿತು ಎಂಬ ಆರೋಪವನ್ನು ಸಾಬೀತುಪಡಿಸಬೇಕು ಮತ್ತು ಅಂತಹ ಕ್ರಮ ಸೋಲಿಗೆ ಹೇಗೆ ಕಾರಣವಾಯಿತು ಎಂಬ ನಿಖರ ಅಂಶವನ್ನು ಅರ್ಜಿದಾರರು ತಮ್ಮ ದಾವೆಯಲ್ಲಿ ಕಾಣಿಸಬೇಕಿತ್ತು. ಆದರೆ ಕೆ.ಶಿವಕುಮಾರ್ ಸಲ್ಲಿಸಿರುವ ಈ ಚುನಾವಣಾ ತಕರಾರು ಅರ್ಜಿಯಲ್ಲಿ ಇಂತಹ ಯಾವುದೇ ಅಂಶಗಳು ಇಲ್ಲದ ಕಾರಣ ಈ ನಿರರ್ಥಕ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಶಾಸಕ ಎನ್‌.ಎ.ಹ್ಯಾರಿಸ್ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದರು.

‘ಚುನಾವಣೆ ವೇಳೆ ಸಲ್ಲಿಸಲಾದ ಫಾರಂ ನಂ. 26ರಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರಿಸ್‌ ತಮ್ಮ ಆಸ್ತಿ ವಿವರಗಳನ್ನು ಸರಿಯಾಗಿ ಘೋಷಿಸಿಲ್ಲ. ಹೀಗಾಗಿ, ಅವರನ್ನು ಅನರ್ಹಗೊಳಿಸಿ ನನ್ನನ್ನೇ ವಿಜಯಶಾಲಿ ಎಂದು ಘೋಷಿಸಬೇಕು’ ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ.ಶಿವಕುಮಾರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಹ್ಯಾರಿಸ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಉದಯ ಹೊಳ್ಳ ಅವರು, ‘ಅರ್ಜಿದಾರರು ಹ್ಯಾರಿಸ್‌ ಅವರಿಗೆ ಕಿರುಕುಳ ನೀಡುವ ಉದ್ದೇಶದಿಂದ ಮತ್ತು ಮಾನಸಿಕ ಯಾತನೆ ಉಂಟು ಮಾಡುವ ದೃಷ್ಟಿಯಿಂದ ಈ ತಕರಾರು ಅರ್ಜಿ ಸಲ್ಲಿಸಿದ್ದಾರೆ‘ ಎಂದು ಆಕ್ಷೇಪಿಸಿದರು.

‘ಅರ್ಜಿದಾರರು ದಾವೆಯಲ್ಲಿ ವಿವರಿಸಿರುವ ಅಂಶಗಳ ಆಧಾರದಡಿ ಹ್ಯಾರಿಸ್‌ ಅವರ ವಿರುದ್ಧದ ಆರೋಪಗಳ ವಿಚಾರಣೆಗಾಗಿ ಪ್ರತಿವಾದಿಗಳನ್ನು ಅರೆ ಅಪರಾಧಿಕ ನ್ಯಾಯಿಕ ಪ್ರಕ್ರಿಯೆಗೆ ಒಳಪಡಿಸಬಾರದು. ಈ ಹಂತದಲ್ಲಿಯೇ ಈ ಅರ್ಜಿಯನ್ನು ತಿರಸ್ಕರಿಸಬೇಕು’ ಎಂದು ಕೋರಿ ಸುಪ್ರೀಂ ಕೋರ್ಟ್‌ನ ಪೂರ್ವ ನಿದರ್ಶನದ ತೀರ್ಪೊಂದನ್ನು ನೀಡಿದರು.

ಇದೇ ವೇಳೆ ಪ್ರತಿವಾದಿ ಪರ ಹಾಜರಿದ್ದ ಹಿರಿಯ ವಕೀಲ ವಿವೇಕ ರೆಡ್ಡಿ ಅವರೂ ಇದಕ್ಕೆ ಪ್ರತಿಯಾಗಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ಸುಪ್ರೀಂ ಕೋರ್ಟ್‌ನ ಮತ್ತೊಂದು ಪೂರ್ವ ನಿದರ್ಶನದ ತೀರ್ಪನ್ನು ನೀಡುತ್ತಿರುವುದಾಗಿ ತಿಳಿಸಿದರು. ಉಭಯತ್ರರ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಸುಪ್ರೀಂ ಕೋರ್ಟ್‌ನ ಎರಡೂ ತೀರ್ಪುಗಳ ಪರಾಮರ್ಶೆ ನಡೆಸುವುದಾಗಿ ತಿಳಿಸಿ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು. ಹ್ಯಾರಿಸ್ ಪರ ಹೈಕೋರ್ಟ್ ವಕೀಲ ಪಿ.ಉಸ್ಮಾನ್‌ ವಕಾಲತ್ತು ವಹಿಸಿದ್ದರು.

ಅರ್ಜಿಯಲ್ಲಿ ಏನಿದೆ?: ‘2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌  ಶಾಸಕ ಎನ್.ಎ.ಹ್ಯಾರಿಸ್ ತಮ್ಮ ಚರ ಮತ್ತು ಸ್ಥಿರಾಸ್ತಿಗಳ ಮಾಹಿತಿಯನ್ನು ಆಯೋಗಕ್ಕೆ ಸಮರ್ಪಕವಾಗಿ ಒದಗಿಸಿಲ್ಲ. ಅವರ ಚುನಾವಣಾಧಿಕಾರಿಗೆ ಸುಳ್ಳು ಘೋಷಣೆಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಚರ ಮತ್ತು ಸ್ಥಿರಾಸ್ತಿಗಳನ್ನು ವಾಸ್ತವಕ್ಕಿಂತಲೂ ಕಡಿಮೆ ಅಂದಾಜಿನಲ್ಲಿ ದಾಖಲಿಸಿದ್ದಾರೆ. ಹೀಗಾಗಿ, ಈ ಅಸಮರ್ಪಕ ನಾಮಪತ್ರ ಸ್ವೀಕಾರದ ಕಾರಣದಿಂದಾಗಿ ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿ ನನ್ನ ಸೋಲಿಗೆ ಕಾರಣವಾಗಿದೆ. ಹೀಗಾಗಿ, ಅವರನ್ನು ಅನರ್ಹಗೊಳಿಸಿ ನನ್ನನ್ನೇ ವಿಜೇತ ಅಭ್ಯರ್ಥಿ ಎಂದು ಘೋಷಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.