ADVERTISEMENT

1.5 ಲಕ್ಷ ಆರೋಗ್ಯ ಕೇಂದ್ರ ಸ್ಥಾಪನೆ: ಸಚಿವ ಡಾ.ಹರ್ಷವರ್ಧನ್‌

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 19:38 IST
Last Updated 12 ಅಕ್ಟೋಬರ್ 2019, 19:38 IST
ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (ಸಿಎಫ್‌ಟಿಆರ್‌ಐ) ಶನಿವಾರ ಭೇಟಿ ನೀಡಿದ್ದ ಕೇಂದ್ರ ಸಚಿವ ಡಾ.ಹರ್ಷವರ್ಧನ್‌ ಅವರು ಸಂಸ್ಥೆಯಲ್ಲಿ ತಯಾರಿಸಿರುವ ಆಹಾರದ ರುಚಿ ಸವಿದರು. ಸಂಸ್ಥೆ ನಿರ್ದೇಶಕ ರಾಘವರಾವ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (ಸಿಎಫ್‌ಟಿಆರ್‌ಐ) ಶನಿವಾರ ಭೇಟಿ ನೀಡಿದ್ದ ಕೇಂದ್ರ ಸಚಿವ ಡಾ.ಹರ್ಷವರ್ಧನ್‌ ಅವರು ಸಂಸ್ಥೆಯಲ್ಲಿ ತಯಾರಿಸಿರುವ ಆಹಾರದ ರುಚಿ ಸವಿದರು. ಸಂಸ್ಥೆ ನಿರ್ದೇಶಕ ರಾಘವರಾವ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಮೈಸೂರು: ಆಯುಷ್ಮಾನ್‌ ಭಾರತ ಯೋಜನೆಯಡಿ 2022ರೊಳಗೆ ದೇಶದಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮಪಾಲನಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್‌ ತಿಳಿಸಿದರು.

‘ಈಗಾಗಲೇ ವಿವಿಧೆಡೆ 22 ಸಾವಿರ ಕೇಂದ್ರಗಳನ್ನು ತೆರೆಯಲಾಗಿದೆ. ಸ್ವಸ್ಥ ಭಾರತ ಕಟ್ಟುವುದೇ ನಮ್ಮ ಗುರಿ. ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್‌ನಂಥ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳು ಈ ಕೇಂದ್ರಗಳಲ್ಲಿ ಇರಲಿವೆ. ವಿವಿಧ ರೋಗಗಳ ತಪಾಸಣೆಗೆ ಆದ್ಯತೆ ನೀಡಲಾಗುವುದು. ಚಿಕಿತ್ಸೆ ಮಾತ್ರವಲ್ಲದೇ; ಶಿಕ್ಷಣ ಹಾಗೂ ಜಾಗೃತಿಗೆ ಒತ್ತು ನೀಡಲಾಗುವುದು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‌‘ಆರೋಗ್ಯ ಸಂಬಂಧ ಕಾಳಜಿ ಮೂಡಿಸಲು ಹಾಗೂ ವೈಜ್ಞಾನಿಕ ಮನೋಭಾವ ಮೂಡಿಸಲು ಆರೋಗ್ಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಚಳವಳಿ ನಡೆಯಬೇಕು. ಕೇಂದ್ರ ಸರ್ಕಾರವು ವಿವಿಧ ಹಂತಗಳಲ್ಲಿ ಆರೋಗ್ಯ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮೀಸಲಿಟ್ಟಿದೆ. ಪ್ರತಿ ಬಜೆಟ್‌ನಲ್ಲೂ ಇದನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ADVERTISEMENT

ನ. 5ರಿಂದ ವಿಶ್ವ ವಿಜ್ಞಾನ ಮೇಳ
ಕೋಲ್ಕತ್ತದಲ್ಲಿ ನ. 5ರಿಂದ 8ರವರೆಗೆ ಐದನೇ ‘ಭಾರತೀಯ ವಿಶ್ವ ವಿಜ್ಞಾನ ಮೇಳ’ ಆಯೋಜಿಸಲಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ತಿಳಿಸಿದರು.

ಮೇಳವು ಕೇಂದ್ರ ಸರ್ಕಾರ ಹಾಗೂ ವಿಜ್ಞಾನ ಭಾರತಿ ಆಶ್ರಯದಲ್ಲಿ ನಡೆಯಲಿದ್ದು, ದೇಶ ವಿದೇಶಗಳ ಸುಮಾರು 12 ಸಾವಿರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಂಸದರ ಆದರ್ಶ ಗ್ರಾಮಗಳಿಂದ ತಲಾ ಐವರು ಮಕ್ಕಳನ್ನು ಕರೆತರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.