ADVERTISEMENT

ದ್ವೇಷ ಭಾಷಣ ಮಸೂದೆ: ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 16:18 IST
Last Updated 23 ಡಿಸೆಂಬರ್ 2025, 16:18 IST
ಬಿಜೆಪಿಯ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲಾ ಘಟಕಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಿಜೆಪಿಯ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲಾ ಘಟಕಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಮಸೂದೆಯ ಮೂಲಕ ವಾಕ್‌ ಸ್ವಾತಂತ್ರ್ಯ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲಾ ಘಟಕಗಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಆಯೋಜಿಸಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರ ಜತೆ ಮಾತನಾಡಿದರು.

ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ‘ರಾಜಕೀಯ ವಿರೋಧಿಗಳನ್ನು ಜೈಲಿಗೆ ತಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಕರಾಳ ಕಾನೂನು ರೂಪಿಸಲು ಮುಂದಾಗಿದೆ. ಈ ಮಸೂದೆಗೆ ಒಪ್ಪಿಗೆ ನೀಡಬಾರದು ಎಂದು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತೇವೆ’ ಎಂದರು.

ADVERTISEMENT

ಉತ್ತರ ಜಿಲ್ಲಾ ಘಟಕ ಅಧ್ಯಕ್ಷ ಎಸ್‌.ಹರೀಶ್ ಮಾತನಾಡಿ, ‘ವಾಕ್‌ ಸ್ವಾತಂತ್ರ್ಯ ದಮನ ಮಾಡುವುದಕ್ಕಾಗಿ ಈ ಕಾಯ್ದೆ ಜಾರಿ ಮಾಡಲು ಸರ್ಕಾರ ಮುಂದಾಗಿದೆ. ನ್ಯಾಯಾಂಗದ ಅಧಿಕಾರವನ್ನು ಉಲ್ಲಂಘಿಸಿ ಡಿವೈಎಸ್ಪಿ ಮೇಲ್ಪಟ್ಟ ಅಧಿಕಾರಿಗಳು ಯಾರನ್ನು ಬೇಕಾದರೂ ಏಕಾಏಕಿ ಜೈಲಿಗೆ ಹಾಕುವ ಅಧಿಕಾರ ಹೊಂದಲಿದ್ದಾರೆ. ರಾಜ್ಯದಲ್ಲಿ ತುರ್ತುಪರಿಸ್ಥಿಯನ್ನು ಹೇರಲು ಮುಂದಾಗಿದ್ದಾರೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳ ಆಳ್ವಿಕೆ ಇರುವ ರಾಜ್ಯಗಳಲ್ಲಿ ಇದೇ ಮಾದರಿಯ ಕಾನೂನಿನ ಮೂಲಕ ವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವುದನ್ನು ಖಂಡಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿಗೌಡ, ಬೆಂಗಳೂರು ಉತ್ತರ ಜಿಲ್ಲಾ ಘಟಕದ ಉಪಾಧ್ಯಕ್ಷೆ  ಆಶಾ ಎಸ್. ರಾವ್,  ಪ್ರಧಾನ ಕಾರ್ಯದರ್ಶಿ ಜೆ. ರಂಗಸ್ವಾಮಿ, ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್. ರಾಘವೇಂದ್ರ ರಾವ್, ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಮತ್ತು ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.