ADVERTISEMENT

ವರದಿಗೆ ಸಚಿವರ ಸ್ಪಂದನೆ: ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2020, 19:30 IST
Last Updated 17 ಫೆಬ್ರುವರಿ 2020, 19:30 IST
‘ಪ್ರಜಾವಾಣಿ’ ವರದಿಯನ್ನು ಸಚಿವ ಎಸ್‌. ಸುರೇಶ್‌ಕುಮಾರ್‌ ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವುದು
‘ಪ್ರಜಾವಾಣಿ’ ವರದಿಯನ್ನು ಸಚಿವ ಎಸ್‌. ಸುರೇಶ್‌ಕುಮಾರ್‌ ಅವರು ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವುದು   

ಹಾವೇರಿ: ಹಾನಗಲ್‌ ತಾಲ್ಲೂಕು ನರೇಗಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸೋಮವಾರ ಭೇಟಿ ನೀಡಿ, ಪರ್ಯಾಯ ಕೊಠಡಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕೊಠಡಿ ಕೊರತೆಯಿದ್ದ ಕಾರಣ, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರಾಮದ ಹೊರಭಾಗದಲ್ಲಿರುವ ಉರ್ದು ಪ್ರೌಢಶಾಲೆಯಲ್ಲಿ ತಾತ್ಕಾಲಿಕವಾಗಿ ಕೊಠಡಿ ನೀಡಲಾಗಿತ್ತು. ಆದರೆ, ಮಧ್ಯಾಹ್ನದ ವೇಳೆ ಬಿಸಿಯೂಟ ಮಾಡಲು ಬಿಸಿಲಿನಲ್ಲೇ ಮಕ್ಕಳು ಮೂಲಶಾಲೆಗೆ (ಸರ್ಕಾರಿ ಶಾಲೆ) 1 ಕಿ.ಮೀ. ಬಂದು ಹೋಗಬೇಕಿತ್ತು.

ಶಾಲೆಯಿಂದ ಶಾಲೆಗೆ ಅಲೆದಾಡುವ ಮಕ್ಕಳ ಬವಣೆ ಕುರಿತು ಸೋಮವಾರ ‘ಪ್ರಜಾವಾಣಿ’ಯಲ್ಲಿ ಇಲ್ಲಿ ಪಾಠ; ಅಲ್ಲಿ ಬರೀ ಬಿಸಿಯೂಟ! ವಿಶೇಷ ವರದಿ ಮುಖಪುಟದಲ್ಲಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಪತ್ರಿಕಾ ವರದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.

ADVERTISEMENT

‘ಬೆಳಗಾವಿ ವಿಭಾಗದ ಶಿಕ್ಷಣ ಆಯುಕ್ತರಿಗೆ ಈ ಕುರಿತು ಅಗತ್ಯ ಪರಿಹಾರ ಕ್ರಮವನ್ನು ಕೂಡಲೇ ಕೈಗೊಂಡು ಮಕ್ಕಳಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಸೂಚಿಸಿದ್ದೇನೆ’ ಎಂದು ಸಚಿವರು ಪ್ರತಿಕ್ರಿಯೆ ಕೂಡ ನೀಡಿದರು. ಹೀಗಾಗಿ, ವರದಿ ಪ್ರಕಟವಾದ ದಿನವೇ ಅಕ್ಷರ ದಾಸೋಹ ನಿರ್ದೇಶಕ, ಕ್ಷೇತ್ರ ಸಮನ್ವಯಾಧಿಕಾರಿ, ಶಿಕ್ಷಣ ಸಂಯೋಜಕ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು ಶಾಲೆಗೆ ಭೇಟಿ ನೀಡಿ, ಸಭೆ ನಡೆಸಿದರು. ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರಿಂದ ಸಮಸ್ಯೆ ಆಲಿಸಿದರು.

‘ಸರ್ಕಾರಿ ಶಾಲೆಯ ಪಕ್ಕದಲ್ಲೇ ಇರುವ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ ಅನ್ನು ದುರಸ್ತಿಗೊಳಿಸಿ, ವಿದ್ಯಾರ್ಥಿಗಳ ಕಲಿಕೆಗೆ ವ್ಯವಸ್ಥೆ ಮಾಡಿಕೊಳ್ಳಿ. ಅದಕ್ಕೆ ಅಗತ್ಯವಿರುವ ಖರ್ಚನ್ನು ಶಾಲಾ ಅನುದಾನದಲ್ಲಿ ಬಳಸಿ’ ಎಂದು ಸೂಚನೆ ನೀಡಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸತೀಶ ಕುರುಬರ ತಿಳಿಸಿದ್ದಾರೆ.ಮಕ್ಕಳ ಸಮಸ್ಯೆಗೆ ಸ್ಪಂದಿಸಿದ ಪ್ರಜಾವಾಣಿಗೆ ಅಭಿನಂದನೆಗಳನ್ನೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.