ADVERTISEMENT

ಹಾನಗಲ್ | ಕುಸಿಯಲಿರುವ ಕೊಠಡಿಯಲ್ಲಿ ಮಕ್ಕಳ ಕಲಿಕೆ!

‘ಕನಕನ ಕಿಂಡಿ’ಯಂತಾದ ಶಾಲಾ ಗೋಡೆ; 5 ತಿಂಗಳಾದರೂ ಬಿಡುಗಡೆಯಾಗದ ಬಾಡಿಗೆ ಹಣ

ಸಿದ್ದು ಆರ್.ಜಿ.ಹಳ್ಳಿ
Published 16 ಫೆಬ್ರುವರಿ 2020, 2:00 IST
Last Updated 16 ಫೆಬ್ರುವರಿ 2020, 2:00 IST
ಹಾನಗಲ್‌ ತಾಲ್ಲೂಕು ಹರವಿ ಗ್ರಾಮದಲ್ಲಿ ಶಿಥಿಲವಾಗಿರುವ ಶಾಲಾ ಕೊಠಡಿಯಲ್ಲಿ ಮಕ್ಕಳ ಕಲಿಕೆ   –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ
ಹಾನಗಲ್‌ ತಾಲ್ಲೂಕು ಹರವಿ ಗ್ರಾಮದಲ್ಲಿ ಶಿಥಿಲವಾಗಿರುವ ಶಾಲಾ ಕೊಠಡಿಯಲ್ಲಿ ಮಕ್ಕಳ ಕಲಿಕೆ   –ಪ್ರಜಾವಾಣಿ ಚಿತ್ರ: ನಾಗೇಶ ಬಾರ್ಕಿ   

ಹಾವೇರಿ: ಆಗಸ್ಟ್‌ ಮತ್ತು ಅಕ್ಟೋಬರ್‌ನಲ್ಲಿ ಹಾನಗಲ್‌ ತಾಲ್ಲೂಕು ಹರವಿ ಗ್ರಾಮಕ್ಕೆ ಬಂದ ನೆರೆ, ಶಾಲಾ ಮಕ್ಕಳ ಕಲಿಕೆ ಮೇಲೆ ಬರೆ ಎಳೆದು ಹೋಗಿದೆ. ಅತಿವೃಷ್ಟಿ ಮತ್ತು ಪ್ರವಾಹಸೃಷ್ಟಿಸಿದ ಸಮಸ್ಯೆಯಿಂದ ಇಲ್ಲಿನ ಮಕ್ಕಳು ಇಂದಿಗೂ ಹೊರಬರಲು ಸಾಧ್ಯವಾಗಿಲ್ಲ.

ಹರವಿ ಗ್ರಾಮದ ಸರ್ಕಾರಿ ಹಿರಿಯ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳು ಶಿಥಿಲವಾಗಿದ್ದು, ಗೋಡೆಗಳಲ್ಲಿ ದೊಡ್ಡ ದೊಡ್ಡ ಕಿಂಡಿಗಳಾಗಿವೆ. ಚಾವಣಿಯ ಸಿಮೆಂಟ್‌ ಕಿತ್ತು ಹೋಗಿದ್ದು, ಕಬ್ಬಿಣದ ಸರಳುಗಳು ಕಾಣುತ್ತಿವೆ. ಬಿರುಕುಬಿಟ್ಟ ಗೋಡೆಗಳು ಈಗಲೋ ಆಗಲೋ ಕುಸಿದು ಬೀಳುವಂತಿವೆ. ಭಯದಲ್ಲೇ 150 ಮಕ್ಕಳು ಕಲಿಯುತ್ತಿದ್ದಾರೆ.

ಶತಮಾನ ಕಂಡ ಶಾಲೆ: 1914ರಲ್ಲಿ ಆರಂಭವಾದ ಈ ಶಾಲೆಯು 2014ರಲ್ಲಿ ‘ಶತಮಾನೋತ್ಸವ’ ಆಚರಿಸಿಕೊಂಡಿದೆ. ಆ ಸಂದರ್ಭದಲ್ಲೇ ಸಣ್ಣಪುಟ್ಟ ರಿಪೇರಿಗಳಿದ್ದವು. ‘ದುರಸ್ತಿ ಮಾಡಿಸಿಕೊಡುತ್ತೇವೆ’ ಎಂದು ಶತಮಾನೋತ್ಸವ ಕಾರ್ಯಕ್ರಮದಲ್ಲಿ ಹೇಳಿದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಭರವಸೆ ಐದು ವರ್ಷ ಕಳೆದರೂ ಈಡೇರಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ADVERTISEMENT

ಬರೆ ಎಳೆದ ನೆರೆ!: ‘2019ರ ಆಗಸ್ಟ್‌ನಲ್ಲಿ ಧರ್ಮಾ ಮತ್ತು ವರದಾ ನದಿಯ ಪ್ರವಾಹ ನುಗ್ಗಿದ ಪರಿಣಾಮ ಊರು ಎಂಟು ದಿನ ನಡುಗಡ್ಡೆಯಾಗಿತ್ತು. 50 ಮನೆಗಳು ನೀರಿನಲ್ಲಿ ಭಾಗಶಃ ಮುಳುಗಿಹೋಗಿದ್ದವು. ಶಾಲೆಯ ಆವರಣದಲ್ಲಿ ನೀರು ನಿಂತು ಗೋಡೆಗಳು ಕುಸಿದು ಬಿದ್ದವು. ಆ ಸಂದರ್ಭದಲ್ಲಿ ಊರಿನಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರನ್ನು ಸ್ಮಶಾನಕ್ಕೆ ಸಾಗಿಸಲು ಸಾಧ್ಯವಾಗದೆ, ಮನೆಯ ಹಿತ್ತಲಿನಲ್ಲೇ ಮಣ್ಣು ಮಾಡಲಾಯಿತು’ ಎಂದು ಗ್ರಾಮಸ್ಥ ತಿರುಕಪ್ಪ ಜಾವೂರು ನೆನಪಿಸಿಕೊಂಡರು.

ಬಾಡಿಗೆ ಹಣ ಬಂದಿಲ್ಲ: ಶಾಲೆಯ ಒಂದು ಕೊಠಡಿ ಮಾತ್ರ ಸುಸಜ್ಜಿತವಾಗಿದ್ದು, ಅಲ್ಲಿ, 1ರಿಂದ 3ನೇ ತರಗತಿಯ 61 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 4ರಿಂದ 8ನೇ ತರಗತಿಯ ಮಕ್ಕಳು ಶಿಥಿಲ ಕಟ್ಟಡ ಮತ್ತು ಬಾಡಿಗೆ ಕಟ್ಟಡದಲ್ಲಿ ಕಲಿಯುತ್ತಿದ್ದಾರೆ. ಆರು ತಿಂಗಳಿನಿಂದ ಒಂದೇ ಒಂದು ರೂಪಾಯಿ ಕೂಡ ಬಾಡಿಗೆ ಹಣ ಬಿಡುಗಡೆಯಾಗಿಲ್ಲ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಶಂಭುಲಿಂಗಪ್ಪ ಭದ್ರಣ್ಣನವರ.

ಮುರಿದು ಬಿದ್ದ ಶಾಲಾ ಗೋಡೆಯ ಮೇಲೆ ಬರೆದಿದ್ದ‘ಬಾಳುವಷ್ಟು ಕಾಲವೂ ಕಲಿಯುತ್ತಲೇ ಇರಬೇಕು’ ಎಂಬ ತೀ.ನಂ.ಶ್ರೀಯವರ ವಾಣಿ, ವ್ಯವಸ್ಥೆಯನ್ನು ಅಣಕಿಸುವಂತೆ ತೋರಿತು.

ಶಾಲಾ ಆವರಣದಲ್ಲಿ ‘ಅನಾರೋಗ್ಯ’ ಕಟ್ಟಡ!
ಈ ಶಾಲೆಯ ಆವರಣದಲ್ಲಿರುವ ಆರೋಗ್ಯ ಇಲಾಖೆಯ ಎಎನ್‌ಎಂ ವಸತಿನಿಲಯ ಸಂಪೂರ್ಣ ಶಿಥಿಲವಾಗಿದ್ದು, ಅಪಾಯ ಆಹ್ವಾನಿಸುತ್ತಿದೆ. ಜಾಗದ ಕೊರತೆಯಿಂದ ಶಾಲಾ ಮಕ್ಕಳು ಈ ಪಾಳು ಕಟ್ಟಡದ ಪಕ್ಕವೇ ಆಟವಾಡುತ್ತಾರೆ ಮತ್ತು ಬಿಸಿಯೂಟ ಸೇವಿಸುತ್ತಾರೆ.

‘10 ವರ್ಷಗಳಿಂದ ಪಾಳು ಬಿದ್ದಿರುವ ಈ ಕಟ್ಟಡ ತೆರವುಗೊಳಿಸಲು ಅನೇಕ ಬಾರಿ ಡಿಡಿಪಿಐ ಮತ್ತು ಬಿಇಒ ಅವರು ಆರೋಗ್ಯ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಮುಖ್ಯಶಿಕ್ಷಕ ರೇವಣಸಿದ್ದಪ್ಪ ತಳವಾರ.ಐದು ಹೊಸ ಕೊಠಡಿಗಳು ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸುತ್ತೇವೆ ಎಂದು ಡಿಡಿಪಿಐ ಭರವಸೆ ನೀಡಿದ್ದಾರೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.