ADVERTISEMENT

₹ 1 ಕೋಟಿ ವಶ: ಒಬ್ಬನ ಸೆರೆ

ಹವಾಲಾ ವಹಿವಾಟಿನ ಶಂಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2019, 18:34 IST
Last Updated 17 ಮೇ 2019, 18:34 IST

ಮಂಗಳೂರು: ನಗರದ ರಥಬೀದಿಯಲ್ಲಿ ಶುಕ್ರವಾರ ಬೆಂಗಳೂರಿನ ಮಂಜುನಾಥ್‌ (56) ಎಂಬಾತನನ್ನು ಬಂಧಿಸಿರುವ ಪೊಲೀಸರು, ₹ 1 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಆ ಹಣ ಹವಾಲಾ ವಹಿವಾಟಿಗೆ ಸಂಬಂಧಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

‘ಹಣದ ಮೂಲ ಮತ್ತು ಅದನ್ನು ಯಾರಿಗೆ ತಲುಪಿಸಲಾಗುತ್ತಿತ್ತು ಎಂಬುದರ ಕುರಿತು ಆತ ಸರಿಯಾದ ಮಾಹಿತಿ ನೀಡುತ್ತಿಲ್ಲ. ಹಣದ ಮೂಲಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನೂ ಹೊಂದಿರಲಿಲ್ಲ’ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ಬೆಂಗಳೂರಿನ ವ್ಯಕ್ತಿಯೊಬ್ಬರು ನಗದು ಇದ್ದ ಸೂಟ್‌ಕೇಸ್‌ ನೀಡಿದ್ದು, ಅದನ್ನು ರಥಬೀದಿಯಲ್ಲಿ ಸಂಪರ್ಕಿಸುವ ವ್ಯಕ್ತಿಗೆ ತಲುಪಿಸುವಂತೆ ಸೂಚಿಸಿದ್ದರು ಎಂದಷ್ಟೇ ಉತ್ತರ ನೀಡಿದ್ದಾನೆ. ಹವಾಲಾ ಮೂಲಕ ಚಿನ್ನದ ವ್ಯಾಪಾರಿಗೆ ಹಣ ತಲುಪಿಸಲು ಆತ ನಿಯೋಜನೆಗೊಂಡಿರಬಹುದು ಎಂಬ ಶಂಕೆ ತನಿಖಾ ತಂಡಕ್ಕೆ ವ್ಯಕ್ತವಾಗಿದೆ. ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದು, ಮಂಜುನಾಥ್‌ನನ್ನು ಬಂಧಿಸಲಾಗಿದೆ.

ADVERTISEMENT

‘ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ನಗದು ರವಾನೆ ಆಗುತ್ತಿರುವ ಬಗ್ಗೆ ನಮಗೆ ಮಾಹಿತಿ ಇತ್ತು. ಕೆಲವು ರೌಡಿಗಳು ಈ ರೀತಿ ಹಣ ಸಾಗಿಸುವವರ ಮೇಲೆ ನಿಗಾ ಇಟ್ಟು, ದರೋಡೆಗೆ ಯತ್ನಿಸುತ್ತಿರುವ ಬಗ್ಗೆಯೂ ಮಾಹಿತಿ ಲಭಿಸಿತ್ತು’ ಎಂದು ಕಮಿಷನರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.