ADVERTISEMENT

ಅತ್ಯಾಚಾರ ಸಂತ್ರಸ್ತೆ ಗರ್ಭಪಾತಕ್ಕಾಗಿ ವೈದ್ಯಕೀಯ ಪರೀಕ್ಷೆ ನಡೆಸಲು ನಿರ್ದೇಶನ

ಅತ್ಯಾಚಾರದಿಂದ ಗರ್ಭ ಧರಿಸಿರುವ ಬಾಲಕಿ

​ಪ್ರಜಾವಾಣಿ ವಾರ್ತೆ
Published 13 ಮೇ 2020, 20:15 IST
Last Updated 13 ಮೇ 2020, 20:15 IST
ರಾಜ್ಯ ಹೈಕೋರ್ಟ್‌
ರಾಜ್ಯ ಹೈಕೋರ್ಟ್‌    

ಬೆಂಗಳೂರು: ‘ಅತ್ಯಾಚಾರದಿಂದ ಧರಿಸಿದ ಗರ್ಭ ತೆಗೆಸಲು ಬಯಸಿರುವ ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಿ’ ಎಂದು ಹೈಕೋರ್ಟ್, ಸ್ಥಳೀಯ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಿಗೆ ನಿರ್ದೇಶಿಸಿದೆ.

ಈ ಕುರಿತಂತೆ ಸಂತ್ರಸ್ತೆಯ ತಾಯಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯ ಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

‘ಸಂತ್ರಸ್ತೆಯು ಇದೇ 14ರಂದು ಬೆಳಗ್ಗೆ 11 ಗಂಟೆಗೆ ಅಧೀಕ್ಷಕರ ಎದುರು ಹಾಜರಾಗಬೇಕು. ಗರ್ಭಪಾತ ನಿರ್ಧಾರ ಕೈಗೊಳ್ಳುವ ಮುನ್ನ ವಿವಿಧ ತಜ್ಞರ ವೈದ್ಯಕೀಯ ಮಂಡಳಿ ರಚಿಸಬೇಕು’ ಎಂದು ನ್ಯಾಯಪೀಠ ಜಿಲ್ಲಾ ಆಸ್ಪತ್ರೆ ಅಧೀಕ್ಷಕರಿಗೆ ಸೂಚಿಸಿದೆ.

ADVERTISEMENT

‘ಸದ್ಯ ಕೊರೊನಾದಿಂದಾಗಿ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಸಂತ್ರಸ್ತೆ ಹಾಗೂ ಆಕೆಯ ತಾಯಿ ಜಿಲ್ಲಾ ಆಸ್ಪತ್ರೆಗೆ ತೆರಳಲು ಅನುವಾಗುವಂತೆ ಅಗತ್ಯ ಪಾಸ್, ಆ್ಯಂಬುಲೆನ್ಸ್ ಅಥವಾ ಟ್ಯಾಕ್ಸಿ ಸೌಲಭ್ಯ ಒದಗಿಸಿ’ ಎಂದು ಸ್ಥಳೀಯ ಪೊಲೀಸರು ಮತ್ತು ಜಿಲ್ಲಾ ಆಸ್ಪತ್ರೆಗೆ ನಿರ್ದೇಶಿಸಲಾಗಿದೆ.

‘ಕರ್ನಾಟಕ ಸಂಯೋಜಿತ ಮಕ್ಕಳ ಸಂರಕ್ಷಣಾ ಸೊಸೈಟಿಯು ಸಂತ್ರಸ್ತೆಗೆ ಇದೇ 14ರಂದು ₹ 25 ಸಾವಿರ ಮೊತ್ತದ ಮಧ್ಯಂತರ ಪರಿಹಾರ ಪಾವತಿಸಬೇಕು' ಎಂದೂ ನ್ಯಾಯಪೀಠ ನಿರ್ದೇಶಿಸಿದೆ.

ವೈದ್ಯಕೀಯ ಪರೀಕ್ಷಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.