
ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ನಿರಂಜನ ವಾನಳ್ಳಿ ವಿರುದ್ಧದ ಮಾನನಷ್ಟ ಆರೋಪದ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಪೊಲೀಸರಿಗೆ ನಿರ್ದೇಶಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
‘ಕೋಲಾರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ಮತ್ತು ಗಲ್‌ಪೇಟೆ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ನಿರಂಜನ ವಾನಳ್ಳಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಭಾಗಶಃ ಪುರಸ್ಕರಿಸಿದೆ.
‘ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸುವ ಮುನ್ನ ಅರ್ಜಿದಾರರಿಗೆ ವಿವರಣೆ ನೀಡಲು ಸೂಕ್ತ ಅವಕಾಶ ಕಲ್ಪಿಸಿಲ್ಲ. ಈ ಕಾನೂನಾತ್ಮಕ ತೊಡಕಿನ ಕಾರಣದಿಂದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಪ್ರಕರಣವನ್ನು ಹಿಂದಿರುಗಿಸಲಾಗುತ್ತಿದೆ. ತೀರ್ಪಿನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಗಮನದಲ್ಲಿ ಇರಿಸಿಕೊಂಡು ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ನಿರಂಜನ ವಾನಳ್ಳಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ದೂರುದಾರ ಆರ್.ಮಂಜುನಾಥ್ ಪತ್ರಿಕೋದ್ಯಮ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಕೆಲವು ಆರೋಪಗಳ ಅಡಿಯಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಮಂಜುನಾಥ್ ಅವರನ್ನು ಕೆಲಸದಿಂದ ತೆಗೆದುಹಾಕಿತ್ತು.
ಇದನ್ನು ಪ್ರಶ್ನಿಸಿ ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಮಂಜುನಾಥ್ ಅವರನ್ನು ಕೆಲಸದಿಂದ ತೆಗೆದುಹಾಕಿದ್ದ ಆದೇಶವನ್ನು ರದ್ದುಪಡಿಸಿ, ಪ್ರಕರಣವನ್ನು ವಿಶ್ವವಿದ್ಯಾಲಯಕ್ಕೆ ಹಿಂದಿರುಗಿಸಿತ್ತು.
ಏತನ್ಮಧ್ಯೆ, ಮಂಜುನಾಥ್ ಅವರು ನಿರಂಜನ ವಾನಳ್ಳಿ ವಿರುದ್ಧ ಮಾನನಷ್ಟ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಖಾಸಗಿ ದೂರು ದಾಖಲಿಸಿದ್ದರು. ಈ ದೂರಿನ ಕುರಿತು ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಗಲ್‌ಪೇಟೆ ಠಾಣಾ ಪೊಲೀಸರಿಗೆ 2025ರ ಜೂನ್ 4ರಂದು ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.