ADVERTISEMENT

ವಿದ್ಯಾರ್ಥಿಗೆ ಪ್ರವೇಶ ನೀಡುವಂತೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 17:54 IST
Last Updated 1 ಏಪ್ರಿಲ್ 2021, 17:54 IST

ಬೆಂಗಳೂರು: ಫೆಲೋಶಿಪ್‌ ಪ್ರವೇಶ ಪರೀಕ್ಷೆಯಲ್ಲಿ (ಎಫ್‌ಇಟಿ) 15ನೇ ರ‍್ಯಾಂಕ್‌ ಪಡೆದಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಬಿ. ಸುಜಿತ್‌ ಎಂಬ ವಿದ್ಯಾರ್ಥಿಗೆ ಕ್ರೀಡಾ ಔಷಧಿ ವಿಭಾಗದಲ್ಲಿ ವೈದ್ಯಕೀಯ ಫೆಲೋಶಿಪ್‌ ಕೋರ್ಸ್‌ಗೆ ಪ್ರವೇಶ ನೀಡುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ (ಎನ್‌ಬಿಎ) ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

2020ರ ಅಕ್ಟೋಬರ್‌ನಲ್ಲಿ ನಡೆದಿದ್ದ ಎಫ್‌ಇಟಿಯಲ್ಲಿ ಸುಜಿತ್‌ 15ನೇ ರ‍್ಯಾಂಕ್‌ ಪಡೆದಿದ್ದರು. ಮೊದಲ ಎರಡು ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಲಭಿಸಿದ್ದ ಸೀಟುಗಳನ್ನು ನಿರಾಕರಿಸಿದ್ದ ಅವರು, ಕೊನೆಯ (ಮಾಪ್‌ ಅಪ್‌) ಸುತ್ತಿನ ಕೌನ್ಸೆಲಿಂಗ್‌ಗೆ ಅರ್ಜಿ ಸಲ್ಲಿಸಿದ್ದರು.

2021ರ ಮಾರ್ಚ್‌ 11ರಂದು ಸುತ್ತೋಲೆಯೊಂದನ್ನು ಹೊರಡಿಸಿದ್ದ ಎನ್‌ಬಿಎ, ಮೊದಲ ಎರಡು ಸುತ್ತುಗಳಲ್ಲಿ ಸೀಟುಗಳ ಹಂಚಿಕೆಯಾಗದೇ ಇದ್ದು, ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು ಮಾತ್ರ ಕೊನೆಯ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂಬ ಷರತ್ತು ವಿಧಿಸಿತ್ತು. ಮೊದಲ ಎರಡು ಸುತ್ತುಗಳಲ್ಲಿ ಹಂಚಿಕೆಯಾಗಿದ್ದ ಸೀಟುಗಳನ್ನು ನಿರಾಕರಿಸಿರುವ ಕಾರಣದಿಂದ ಕೊನೆಯ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಅರ್ಜಿದಾರರಿಗೆ ತಿಳಿಸಲಾಗಿತ್ತು.

ADVERTISEMENT

ಮಾರ್ಚ್‌ 23ರಂದು ಮತ್ತೊಂದು ಸುತ್ತೋಲೆ ಹೊರಡಿಸಿದ್ದ ಎನ್‌ಬಿಎ, ಮೊದಲ ಸುತ್ತುಗಳಲ್ಲಿ ಸೀಟು ಹಂಚಿಕೆಯಾಗಿದ್ದರೂ ಅವುಗಳನ್ನು ಒಪ್ಪಿಕೊಳ್ಳದ ಮತ್ತು ಶುಲ್ಕ ಪಾವತಿಸದ ಅಭ್ಯರ್ಥಿಗಳು ಕೊನೆಯ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ತಿಳಿಸಿತ್ತು. ಇದನ್ನು ಸುಜಿತ್‌ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಎಫ್‌ಇಟಿಯಲ್ಲಿ 63, 67 ಮತ್ತು 80ನೇ ರ‍್ಯಾಂಕ್‌ ಗಳಿಸಿದ್ದ ಅಭ್ಯರ್ಥಿಗಳಿಗೆ ಕ್ರೀಡಾ ಔಷಧ ವಿಭಾಗದಲ್ಲಿ ಪ್ರವೇಶ ನೀಡಿರುವುದನ್ನೂ ತಿಳಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ, ಸುಜಿತ್‌ ಅವರಿಗೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂನ ಗಂಗಾ ಮೆಡಿಕಲ್‌ ಸೆಂಟರ್‌ ಮತ್ತು ಆಸ್ಪತ್ರೆಯಲ್ಲಿ ಕ್ರೀಡಾ ಔಷಧ ವಿಭಾಗದಲ್ಲಿ ಪ್ರವೇಶ ನೀಡುವಂತೆ ಗುರುವಾರ ಮಧ್ಯಂತರ ಆದೇಶ ಹೊರಡಿಸಿತು.

ಮಾ.31ಕ್ಕೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡಿದೆ. ಇದೇ ಕಾಲೇಜಿನಲ್ಲಿ 63ನೇ ರ‍್ಯಾಂಕ್‌ ವಿದ್ಯಾರ್ಥಿಗೆ ಕ್ರೀಡಾ ಔಷಧ ವಿಭಾಗದಲ್ಲಿ ಪ್ರವೇಶ ನೀಡಲಾಗಿದೆ. ಈಗಾಗಲೇ ಪ್ರವೇಶ ಪಡೆದಿರುವವರಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂಬ ಸೂಚನೆ ನೀಡಿದ ನ್ಯಾಯಾಲಯ, ಎಲ್ಲ ಪ್ರವೇಶಾತಿಗಳು ಈ ಅರ್ಜಿಯ ಮೇಲಿನ ಅಂತಿಮ ಆದೇಶದ ವ್ಯಾಪ್ತಿಗೆ ಒಳಪಡುತ್ತವೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.