ADVERTISEMENT

ಸುಗ್ರೀವಾಜ್ಞೆ ಹಿಂಪಡೆಯದಿದ್ದರೆ ಹೋರಾಟ: ಎಚ್‌.ಡಿ.ದೇವೇಗೌಡ ಎಚ್ಚರಿಕೆ

ಭೂಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 21:05 IST
Last Updated 28 ಜುಲೈ 2020, 21:05 IST
ಎಚ್‌.ಡಿ. ದೇವೇಗೌಡ
ಎಚ್‌.ಡಿ. ದೇವೇಗೌಡ   

ಬೆಂಗಳೂರು: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ಹಿಂದಕ್ಕೆ ಪಡೆಯದಿದ್ದರೆ, ಬೀದಿಗಿಳಿದು ಹೋರಾಟ ಮಾಡುವುದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

ರೈತರು, ಕಾರ್ಮಿಕರನ್ನು ಬೀದಿ ಪಾಲು ಮಾಡುವ ಮತ್ತು ಉದ್ಯಮಿಗಳಿಗೆ ಮಣೆ ಹಾಕುವ ತಿದ್ದುಪಡಿಗಳನ್ನು ಕೈಬಿಡ ಬೇಕೆಂದು ರಾಜ್ಯ ಸರ್ಕಾರಕ್ಕೆ ಮೂರು ಬಾರಿ ಪತ್ರ ಬರೆದಿದ್ದೇನೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕರ್ನಾಟಕ ಭೂಸುಧಾರಣೆ ಕಾಯ್ದೆ 1961 ಸೆಕ್ಷನ್‌ 79 ಎ, 79 ಬಿ, 79 ಸಿ ರದ್ದು ಮಾಡಿರುವುದು ರೈತ ವಿರೋಧಿ ಕ್ರಮ. ಕೊರೊನಾ ಇದ್ದ ಕಾರಣ ನಾನು ಮಾತನಾಡಲು ಆಗಿರಲಿಲ್ಲ. ಸರ್ಕಾರದ ನಿಯಮಗಳನ್ನು ಉಲ್ಲಂಘಿ ಸಬಾರದು ಎಂಬ ಕಾರಣಕ್ಕೆ ಹಿಂದೆ ಸರಿದಿದ್ದೆ. ಈಗಲೂ ಸುಮ್ಮನೆ ಇದ್ದರೆ ಜನರಿಗೆ ತೊಂದರೆ ಆಗುತ್ತದೆ’ ಎಂದು ದೇವೇಗೌಡ ಹೇಳಿದರು.

ADVERTISEMENT

‘ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ರಿಯಲ್‌ ಎಸ್ಟೇಟ್‌ ಮಾಫಿಯಾಗೆ ಅನುಕೂಲವಾಗಿದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ರಿಯಲ್‌ ಎಸ್ಟೇಟ್‌ ಮಾಫಿಯಾ ಹೆಚ್ಚಲಿದೆ. ರೈತರು ಬೀದಿಗೆ ಬೀಳುತ್ತಾರೆ. ಯಾರೋ ಒಬ್ಬ ಉದ್ಯಮಿ ಬಂದು ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ಖರೀದಿಸುತ್ತಾನೆ. ಏಳು ವರ್ಷಗಳ ಬಳಿಕ ಭೂಮಿ ಪರಭಾರೆ ಮಾಡುತ್ತಾನೆ. ಇದರಿಂದ ರೈತನಿಗೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

ಬಹುಮತ ಇದೆ ಎಂಬ ಒಂದೇ ಕಾರಣಕ್ಕೆ, ಬೇಕಾಬಿಟ್ಟಿಯಾಗಿ ಕಾಯ್ದೆ ಗಳನ್ನು ಮಾಡುವುದು ಸರಿಯಲ್ಲ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.