ADVERTISEMENT

ಮಂಗಳೂರಿಗೆ ಕೈಗಾರಿಕಾ ಕಾರಿಡಾರ್ ವಿಸ್ತರಿಸಿ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 16:18 IST
Last Updated 11 ಫೆಬ್ರುವರಿ 2026, 16:18 IST
ಜೆಡಿಎಸ್ ಸಮಾವೇಶದಲ್ಲಿ ಎಚ್.ಡಿ. ದೇವೇಗೌಡ ಮಾತನಾಡಿದರು.
ಜೆಡಿಎಸ್ ಸಮಾವೇಶದಲ್ಲಿ ಎಚ್.ಡಿ. ದೇವೇಗೌಡ ಮಾತನಾಡಿದರು.   

ನವದೆಹಲಿ: ರಾಷ್ಟ್ರದ ಮೂರು ಪ್ರಮುಖ ಬಂದರುಗಳನ್ನು ಜೋಡಿಸಲು ಬೆಂಗಳೂರಿನಿಂದ - ಮಂಗಳೂರಿನವರೆಗೆ ಕೈಗಾರಿಕಾ ಕಾರಿಡಾರ್‌ ವಿಸ್ತರಿಸಬೇಕು. ರೈತರ ಹಿತ ಕಾಯಲು ಹಲಸು, ಹುಣಸೆ, ನೇರಳೆ ಮಂಡಳಿ ರಚನೆ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಒತ್ತಾಯಿಸಿದರು. 

ರಾಜ್ಯಸಭೆಯಲ್ಲಿ ಮಂಗಳವಾರ ನಡೆದ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಚೆನ್ನೈನಿಂದ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಬೆಂಗಳೂರು ನಡುವಿನ ಪ್ರಮುಖ ಬಂದರುಗಳನ್ನು ಹೊಂದಿರುವ ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಿದೆ. ಅದೇ ರೀತಿ, ಬೆಂಗಳೂರಿನಿಂದ ಮಂಗಳೂರಿನವರೆಗೆ ಈ ಕೈಗಾರಿಕಾ ಕಾರಿಡಾರ್ ವಿಸ್ತರಿಸಿದರೆ ಕೈಗಾರಿಕಾ ಅಭಿವೃದ್ಧಿಗೆ ಬಹಳಷ್ಟು ಅನುಕೂಲ ಆಗುತ್ತದೆ. ಮಂಗಳೂರು ಕೂಡ ಪ್ರಮುಖ ಬಂದರು ಆಗಿದ್ದು; ವಿಶಾಖಪಟ್ಟಣ, ಚೆನ್ನೈ ಹಾಗೂ ಮಂಗಳೂರು ಬಂದರುಗಳನ್ನು ಜೋಡಿಸಿದರೆ ರಾಷ್ಟ್ರದ ಕೈಗಾರಿಕಾಭಿವೃದಿಗೆ ಪರಿವರ್ತನಾತ್ಮಕ ವೇಗ ಬರುತ್ತದೆ‘ ಎಂದರು. 

‘ಕರ್ನಾಟಕವೂ ಸೇರಿ ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಬೆಳೆಯಲಾಗುವ ಹಲಸು, ಹುಣಸೆ, ನೇರಳೆಗೆ ಉತ್ತೇಜನ ನೀಡಲು ಮಕಾನ ಮಂಡಳಿಯಂತೆ ಪ್ರತ್ಯೇಕ ಮಂಡಳಿಯನ್ನು ರಚನೆ ಮಾಡಬೇಕು. ಈ ಮೂರು ಬೆಳೆಗಳು ಔಷಧೀಯ ಗುಣಗಳನ್ನು ಹೊಂದಿದ್ದು, ದಕ್ಷಿಣದ ಭಾಗದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ. ಇವು ಕಡಿಮೆ ಮಳೆ ಅಗತ್ಯವಿರುವ ಬೆಳೆಗಳು‘ ಎಂದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.