ADVERTISEMENT

ತೀಟೆ ತೀರಿಸಿಕೊಳ್ಳಲು ಕ್ರಾಂಗ್ರೆಸ್‌ನವರು ಬೆಂಬಲ ನೀಡಿದ್ದರು: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 16:36 IST
Last Updated 18 ಫೆಬ್ರುವರಿ 2021, 16:36 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಮಂಡ್ಯ: ‘ಕಾಂಗ್ರೆಸ್‌ ಮುಖಂಡರು ತಮ್ಮ ತೀಟೆ ತೀರಿಸಿಕೊಳ್ಳಲು ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದರು. ಕಾಂಗ್ರೆಸ್‌ನ ಆಶ್ರಯದಿಂದ ನಮ್ಮ ರಾಜಕೀಯ ಜೀವನ ನಡೆಯುತ್ತಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ಅವರು ಜೆಡಿಎಸ್‌ನಲ್ಲಿ ಇದ್ದಾಗ ಹೆಚ್ಚಿನ ಸ್ಥಾನ ಗೆದ್ದಿರುವುದಾಗಿ ಹೇಳಿದ್ದಾರೆ. ಆದರೆ 1999ರಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಚುನಾವಣೆಯಲ್ಲಿ ನಾನು, ದೇವೇಗೌಡರು ಸೋತಿದ್ದೆವು. ಆಗ ಕೇವಲ 10 ಸ್ಥಾನ ಗೆದ್ದಿದ್ದೆವು’ ಎಂದರು.

‘2004ರಲ್ಲಿ 58 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದೆವು. ಅದಕ್ಕೆ ಸಿದ್ದರಾಮಯ್ಯ ಕಾರಣರಲ್ಲ, ಪಿಜಿಆರ್‌ ಸಿಂಧ್ಯಾ, ಎಂಪಿ ಪ್ರಕಾಶ್‌ ಮುಂತಾದವರು ಕಾರಣ. ಪಕ್ಷ ಸಂಘಟನೆಗಾಗಿ ಇಂದು ನನ್ನದು ಏಕಾಂಗಿ ಹೋರಾಟ, ಆದರೂ ನಾನು ಉತ್ತಮ ಸ್ಥಾನ ಗಳಿಸಿದ್ದೆ. ಸಿದ್ದರಾಮಯ್ಯ ನಮಗೆ ಕೈಕೊಟ್ಟು ಹೋದಾಗ ಕೇಲವ 500 ವೋಟುಗಳಿಂದ ಗೆದ್ದಿದ್ದರು. ಅದೂ ಪೀಟರ್‌ ಎಂಬಾತ ಬಂದು ಗೆಲ್ಲಿಸಿದ್ದ, ಅದು ಅವರ ಗೆಲುವುಲ್ಲ’ ಎಂದರು.

ADVERTISEMENT

‘ಜೆಡಿಎಸ್‌ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಸಿದ್ದರಾಮಯ್ಯ ಅವರಿಗಿಲ್ಲ. ಅವರು ಜವಾಬ್ದಾರಿಯಿಂದ ಮಾತನಾಡಬೇಕು. ಸಾಲ ಮನ್ನಾ ಮಾಡಲು ಸಿದ್ದರಾಮಯ್ಯ ಬೆಂಬಲ ನೀಡಲಿಲ್ಲ, ಅದೂ ನನ್ನ ಏಕಾಂಗಿ ಹೋರಾಟವಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.