ADVERTISEMENT

ಬಿಜೆಪಿ, ಬಿಎಸ್‌ವೈ ವಿರುದ್ಧ ಎಚ್‌ಡಿಕೆ ಆರೋಪಪಟ್ಟಿ

ಆಪರೇಷನ್‌ ಕಮಲಕ್ಕೆ ಹಣ ನೀಡಿಲ್ಲ ಎಂದು ಯಡಿಯೂರಪ್ಪ ಎದೆಮುಟ್ಟಿ ಪ್ರಮಾಣ ಮಾಡಲು ಸವಾಲು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:42 IST
Last Updated 4 ಡಿಸೆಂಬರ್ 2019, 19:42 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಬೆಂಗಳೂರು: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಉಪಚುನಾವಣೆಯ ಮುನ್ನಾದಿನ ಬಿಜೆಪಿ ವಿರುದ್ಧ ಆರೋಪಪಟ್ಟಿ ಹೊರಡಿಸಿದ್ದು, ‘ಆಪರೇಷನ್‌ಗೆ ಒಂದಾಣೆ ಖರ್ಚು ಮಾಡಿಲ್ಲ ಎಂದು ಎದೆಮುಟ್ಟಿ ಪ್ರಮಾಣ ಮಾಡಲಿ’ ಎಂದು ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ್ದಾರೆ.

‘ಬಿಎಎಸ್‌ವೈಪ್ರಮಾಣ ಮಾಡುವ ದಿನ ನಾನೂ ಜನರ ಎದುರು ಬಂದು ನಿಲ್ಲುತ್ತೇನೆ. ಜನರೆದುರು ಪ್ರಮಾಣ ಮಾಡುವ ಶಕ್ತಿ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.

ಆರೋಪಪಟ್ಟಿಯ ಸಾರಾಂಶ

ADVERTISEMENT

*ಯಾರಿಗಿತ್ತು ಸಂಖ್ಯೆ: ಸಂಖ್ಯೆ ಇದ್ದುದು ಜೆಡಿಎಸ್–ಕಾಂಗ್ರೆಸ್‌ಗೆ. ಬಿಜೆಪಿಗೆ ಯಾಕಿಷ್ಟು ಅಧಿಕಾರದ ಆಸೆ? ರಾಜ್ಯದ ಉದ್ಧಾರಕ್ಕೋ, ನಿಮ್ಮ ಉದ್ಧಾರಕ್ಕೋ?

* ನಿಮ್ಮದು ಸಂವಿಧಾನ ಬದ್ಧ ಸರ್ಕಾರವೇ?: ಕೇವಲ ಅಧಿಕಾರಕ್ಕಾಗಿ ಶಾಸಕರನ್ನು ಖರೀದಿಸಿದ ಬಿಎಸ್‌ವೈ, ಬಿಜೆಪಿ ಮುಂದಿನ ಪೀಳಿಗೆಗೆ ತಿಳಿಸಿದ ಸಂದೇಶವೇನು? ಇದು ಅನೈತಿಕ ಸರ್ಕಾರ, ಮಾಡಿದ್ದು ರಾಜಕೀಯ ವ್ಯಭಿಚಾರ.

* ಹಠದ ಸರ್ಕಾರದ ಒಂದೇ ಒಂದು ಸಾಧನೆ ತಿಳಿಸಬಹುದೇ?: ಅನಗತ್ಯ ಚುನಾವಣೆ ತಂದಿದ್ದು, ಮಕ್ಕಳ ಮೂಲಕ ಕಮಿಷನ್ ದಂಧೆ ಮಾಡಿದ್ದು. ಮಾಧ್ಯಮಗಳ ಕತ್ತು ಹಿಸುಕಿದ್ದು... ಇಷ್ಟೇ ಇವರ ಸಾಧನೆ. ಜನರಿಗಾಗಿ ಏನು ಬೇಕಾದರೂ ಮಾಡುತ್ತೇನೆಂದು ಒಂದು ಮಾತು ಹೇಳುವುದಿಲ್ಲ‌ವಲ್ಲ?

* ಬಿಜೆಪಿ ಸರ್ಕಾರ ರಚಿಸಲು ಮೋದಿ, ಶಾ ಒಪ್ಪಿದ್ದರೇ?: ಅಕ್ರಮದ ಮೂಲಕ ಬಿಎಸ್‌ವೈ ಅವರು ಮೋದಿ, ಶಾ ಮುಖಕ್ಕೆ ಮಸಿ ಬಳಿದಿದ್ದಾರೆ. ಇದು ಬಯಲಾಗದೇ ಉಳಿದ ಸತ್ಯ.

* ಜಾತಿವಾದಿಗಳಲ್ಲವೇ ನೀವು?: ಲಿಂಗಾಯತ ಸಮುದಾಯ ನಿಮ್ಮ ಕಿಸೆಯಲ್ಲಿಲ್ಲ. ನೀವೊಬ್ಬರೇ ಸಮಾಜದ ನಾಯಕರೇನಲ್ಲ. ನೀವು ಒಂದು ಸಮುದಾಯದ ಸ್ವಾಭಿಮಾನವನ್ನೇ ಹರಣ ಮಾಡುತ್ತಿದ್ದೀರಿ.

* ಹಾವಿಗೆ ಹಾಲೆರೆದಂತೆ: ಕೆ.ಆರ್ ಪೇಟೆ ಮತ್ತುಮಹಾಲಕ್ಷ್ಮೀ ಬಡಾವಣೆಯ ಅನರ್ಹ ಶಾಸಕರಿಗೆ ನಾವು ಸಹಾಯ ಮಾಡಿದೆವು. ಹಾವಿಗೆ ಹಾಲೆರೆದಂತಾಯ್ತೆ ನಮ್ಮ ನೆರವು. ದೇವೇಗೌಡರ ಮನದ ನೋವು ಇವರನ್ನು ಸುಮ್ಮನೆ ಬಿಟ್ಟೀತೇ?

* ಮಂಡ್ಯ ಜನರ ಎದುರು ನಿಲ್ಲಲು ಬಿಎಸ್‌ವೈಗೆನಾಚಿಕೆಯಾಗದೇ?: ಹುಟ್ಟೂರಿಗೆ ದ್ರೋಹ ಬಗೆದ ನೀವು ಇಂದು ರಾಜಕೀಯಕ್ಕೆ ಬಂದರೆ ಜನ ಮೆಚ್ಚುತ್ತಾರೆಯೇ?

* ಎಸ್.ಎಂ ಕೃಷ್ಣರದ್ದು ಧರ್ಮ ಕಾರ್ಯವೋ?: ದೇವೇಗೌಡರ ವಿರುದ್ಧ ಕನಕಪುರ ಲೋಕಸಭೆ ಲೋಕಸಭೆ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನು ಹಾಕಿ ತಪ್ಪು ಮಾಡಿದೆ ಎಂದು ಇದೇ ಕೃಷ್ಣ ಹೇಳಿದ್ದರು. ಅಂದಿನಿಂದ ಅವರ ಮೇಲಿದ್ದ ಗೌರವ ಭಾವನೆ ಇಮ್ಮಡಿಯಾಗಿತ್ತು. ಈ ಭಾವನೆಗೇ ಧಕ್ಕೆ ತಂದರಲ್ಲ?

ರಾಕ್ಷಸರು ಯಾರಾಗಿದ್ದರು?

‘ದೇವರಾಜ ಅರಸು ನನ್ನ ಗುರು ಎನ್ನುತ್ತಿದ್ದವರು ಈಗ ಹಣಕ್ಕೆ ಗುಲಾಮರಾಗಿದ್ದಾರೆ. ಅವರ ಲೋಲುಪತೆಗಳು ಬಟಾಬಯಲಾಗಿವೆ. ಇಂಥವರು ನನ್ನ ಸರ್ಕಾರವನ್ನು ರಾಕ್ಷಸ ಸರ್ಕಾರ ಎಂದರು. ಅವರ ಭೋಗಗಳಿಗೆ ಸ್ಪಂದಿಸಿದ್ದರೆ ನಾನು ದೇವರಾಗುತ್ತಿದ್ದೆನೇನೋ?’ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

‘ಸಾಂದರ್ಭಿಕ ಶಿಶು’ವಿನ ಹಳಹಳಿಕೆ....

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ‘ಆರೋಪ ಪಟ್ಟಿ’ಗೆ ಪ್ರತಿಯಾಗಿ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಅವರು ಕೇಳಿರುವ ಪ್ರಶ್ನೆಗಳು ಹೀಗಿವೆ–

* ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ನೇತೃತ್ವದ ಜೆಡಿಎಸ್‌ ಮತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಒಟ್ಟಾಗಿ ಸ್ಪರ್ಧಿಸಿದ್ದವೆ?

* ಚುನಾವಣೆ ಸಂದರ್ಭದಲ್ಲಿ ನಿಮ್ಮ ಮತ್ತು ಸಿದ್ದರಾಮಯ್ಯ ಅವರ ಸಂಬಂಧ ಮೈತ್ರಿಯಿಂದ ಕೂಡಿತ್ತೇ? ನೀವಿಬ್ಬರೂ ಚುನಾವಣೆ ಪ್ರಚಾರದುದ್ದಕ್ಕೂ ಹಾವು–ಮುಂಗುಸಿಯಂತೆ ಪರಸ್ಪರ ವಿರೋಧಿಸಿದ್ದು ನಿಜವಲ್ಲವೇ?

* ಆಕಸ್ಮಿಕವಾಗಿ (ಬಿಜೆಪಿಯನ್ನು ದೂರವಿಡಲೆಂದೇ) ಮುಖ್ಯಮಂತ್ರಿಯಾಗಿದ್ದ ತಾವು ‘ನಾನೊಬ್ಬ ಸಾಂದರ್ಭಿಕ ಶಿಶು’,‘ನಾನೊಬ್ಬ ಕ್ಲರ್ಕ್‌’, ‘ನಾನೊಬ್ಬ ಪೋಸ್ಟ್‌ ಮ್ಯಾನ್‌’,‘ನಾನೊಬ್ಬ ವಿಷಕಂಠ’ ಎಂದು ಹಳಹಳಿಸಿದ್ದು ನಿಜವಲ್ಲವೇ? ಅಂದು ಮುಖ್ಯಮಂತ್ರಿ ಸ್ಥಾನದಲ್ಲಿದ್ದ ನಿಮ್ಮ ಈ ನಿರಂತರ ಅಳಲಿಗೆ ಕಾರಣ ಯಾರು?

* ಮೈತ್ರಿ ಸರ್ಕಾರದಲ್ಲಿ ‘ಮೈತ್ರಿ’ ಎಂಬುದೇ ಕಾಣೆಯಾದ ಸಂಗತಿಯಾಗಿತ್ತು ಎಂಬುದು ನಿಜವಲ್ಲವೇ?

* ತಥಾಕಥಿತ ‘ಮೈತ್ರಿ ಸರ್ಕಾರ’ದ ಆಡಳಿತ ಅವಧಿಯಲ್ಲಿಯೂ ಎರಡೂ ಆಡಳಿತ ಪಕ್ಷಗಳ ನಡುವಿನ ಸಂಬಂಧ ಹಾವು–ಮುಂಗುಸಿಯ ಹಾಗೆ ಮುಂದುವರೆದದ್ದು ನಿಜವಲ್ಲವೇ?

* ತಥಾಕಥಿತ ‘ಮೈತ್ರಿ ಸರ್ಕಾರ’ ಯಾರಿಗೆ ಇಷ್ಟ ಇರಲಿಲ್ಲ, ಸರ್ಕಾರ ಬೀಳಲುಯಾರು ಪ್ರಚೋದನೆ ಕೊಡುತ್ತಾ ಬಂದದ್ದು ನಿಮಗೆ ಚೆನ್ನಾಗಿ ಗೊತ್ತಿರಲೇಬೇಕಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.