ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಡಿಕೆಶಿ–ಎಚ್‌ಡಿಕೆ!
ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇಂದು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದಕ್ಕೆ ಕಾರಣವಾಗಿದ್ದು ಆದಿಚುಂಚನಗಿರಿ ಕ್ಷೇತ್ರದ ಬೆಂಗಳೂರಿನ ವಿಜಯನಗರ ಶಾಖಾ ಮಠದಲ್ಲಿ ಇಂದು ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಒಕ್ಕಲಿಗ ಸಮುದಾಯದ ಜಾಗೃತಿ ಸಭೆ.
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ- 2025 ಹಾಗೂ ಜಾತಿ ಗಣತಿ ಪ್ರಯುಕ್ತ ಒಕ್ಕಲಿಗ ಸಮುದಾಯದ ಜಾಗೃತಿ ಸಭೆ ಆಯೋಜಿಸಲಾಗಿತ್ತು.
ಈ ವೇಳೆ ಪರಸ್ಪರ ರಾಜಕೀಯ ವೈರಿಗಳಾಗಿರುವ ಡಿಕೆಶಿ–ಎಚ್‌ಡಿಕೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಅಲ್ಲದೇ ಉಭಯ ಕುಶಲೋಪರಿ ಆಗಿದೆ. ಈ ಕುರಿತು ಟಿವಿ, ಜಾಲತಾಣಗಳಲ್ಲಿ ವಿಡಿಯೊಗಳು ಹರಿದಾಡುತ್ತಿವೆ. ಇದೇ ವೇಳೆ ಸಚಿವ ಎಂ.ಸಿ. ಸುಧಾಕರ್, ಸಂಸದ ಕೆ. ಸುಧಾಕರ್, ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ನಿಖಿಲ್ ಕುಮಾರಸ್ವಾಮಿ, ಸಿ.ಟಿ ರವಿ ಸಹ ಇದ್ದರು.
ಈ ಕುರಿತು ಟ್ವೀಟ್ ಮಾಡಿರುವ ಎಚ್‌ಡಿಕೆ ಅವರು, ‘ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ- 2025 ಹಾಗೂ ಜಾತಿ ಗಣತಿ' ಬಗ್ಗೆ ನಡೆದ ಒಕ್ಕಲಿಗ ಸಮುದಾಯದ ಜಾಗೃತಿ ಸಭೆಯಲ್ಲಿ ಪಾಲ್ಗೊಳ್ಳಲಾಯಿತು‘ ಎಂದು ತಿಳಿಸಿದ್ದಾರೆ.
‘ಈ ಸಂದರ್ಭದಲ್ಲಿ ಶೈಕ್ಷಣಿಕ ಸಮೀಕ್ಷೆಯ ಸಾಧಕ -ಬಾಧಕಗಳ ಕುರಿತು ಸಮುದಾಯದ ಎಲ್ಲಾ ಹಿರಿಯ ನಾಯಕರು, ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜತೆಯಲ್ಲಿ ಸಮಾಲೋಚನೆ ನಡೆಸಲಾಯಿತು‘ ಎಂದು ತಿಳಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಸಹ ಇದೇ ವಿಚಾರವಾಗಿ ಫೋಟೊಗಳನ್ನು ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.