
ಮಂಡ್ಯ: ‘ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಈ ನಾಲ್ಕು ಗ್ರಾಮಗಳನ್ನು ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
‘ಜನಾಭಿಪ್ರಾಯ ಪರಿಗಣಿಸದೆ ಏಕಪಕ್ಷೀಯವಾಗಿ ಸಂಪುಟ ಸಭೆಯಲ್ಲಿ ಕೂಡ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಳಿದ್ದೇನೆ. ಸರ್ಕಾರ ಜನತೆಯ ನಿಲುವುಗಳಿಗೆ ವಿರುದ್ಧವಾಗಿ ಹೋಗಬಾರದು. ಈ ಹಿನ್ನೆಲೆಯಲ್ಲಿ ತಾವು ಮಧ್ಯಪ್ರವೇಶ ಮಾಡಿ ಇದಕ್ಕೆ ತಡೆಯೊಡ್ಡಬೇಕು’ ಎಂದು ಕೋರಿದ್ದಾರೆ.
‘ರೈತ ನಾಯಕಿ ಸುನಂದಾ ಜಯರಾಂ ನೇತೃತ್ವದಲ್ಲಿ 70 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದೆ. ಈ ಭಾಗದ ಎಲ್ಲ ಗ್ರಾಮಗಳು ಕೃಷಿ ಆಧರಿತವಾಗಿದ್ದು, ಸುಮಾರು 2,000 ಎಕರೆಗೂ ಹೆಚ್ಚು ಭೂಮಿ ನೀರಾವರಿ ಪ್ರದೇಶವಾಗಿರುತ್ತದೆ ಎಂಬುದು ಗಮನಾರ್ಹ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.