ADVERTISEMENT

ದೋಖಾ ಮಾಡಿಕೊಂಡು ಬಂದ ಯೋಗೀಶ್ವರ್: ಕುಮಾರಸ್ವಾಮಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2018, 8:05 IST
Last Updated 27 ಅಕ್ಟೋಬರ್ 2018, 8:05 IST
   

ಮೈಸೂರು: ‘ದೋಖಾ ಮಾಡಿಕೊಂಡೇ ಬಂದಿರುವ ಸಿ.ಪಿ.ಯೋಗೀಶ್ವರ್ ಅವರಿಗೆ ನನ್ನ ಬಗ್ಗೆ ಆರೋಪ ಮಾಡುವ ನೈತಿಕ ಹಕ್ಕಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ತಿರುಗೇಟು ನೀಡಿದರು.

ವರ್ಗಾವಣೆ ಹಣದಲ್ಲಿ ಕುಮಾರಸ್ವಾಮಿ ಚುನಾವಣೆ ಎದುರಿಸುತ್ತಿದ್ದಾರೆ ಎಂಬ ಯೋಗೀಶ್ವರ್ ಆರೋಪಕ್ಕೆ ಅವರು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.

‘ವಿಧಾನಸೌಧದ ನನ್ನ ಕಚೇರಿಯಲ್ಲಿ ಮೆರಿಟ್ ಆಧಾರದ ಮೇಲೆ ಕೆಲಸ ಕೊಟ್ಟಿದ್ದೇನೆ. ಯಾರಿಗೂ ನಾನು ಪೇಮೆಂಟ್ ಮೇಲೆ ಕೆಲಸ ಕೊಟ್ಟಿಲ್ಲ. ಈ ಬಗ್ಗೆ ನಾನು ಬಹಿರಂಗ ಸವಾಲು ಮಾಡುತ್ತೇನೆ. ನಾನು ಹಣ ಪಡೆದಿರುವುದನ್ನು ಯಾರು ಬೇಕಾದರೂ ಸಾಬೀತು ಮಾಡಲಿ’ ಎಂದರು.

ADVERTISEMENT

ಯೋಗೇಶ್ವರ್ ಅರಣ್ಯ ಸಚಿವರಾಗಿದ್ದಾಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿಯೇ ಖಾತೆ ನಿಭಾಯಿಸಿದರೇನು? ನಿವೇಶನ ಕೊಡುವುದಾಗಿ ಜನರಿಂದ‌ ಹಣ ಸಂಗ್ರಹಿಸಿ ಅದರಿಂದ ಜೀವನ ಮಾಡುತ್ತಿದ್ದಾರೆ. ಅವರಿಂದ ನಾನು ನೀತಿ ಪಾಠ ಕಲಿಯಬೇಕಿಲ್ಲ ಎಂದು ಖಾರವಾಗಿ ಹೇಳಿದರು.

ಯಂಕ, ನಾಣಿ, ಸೀನ ಇಟ್ಟುಕೊಂಡೇ ರಾಜ್ಯಭಾರ
‘ನಮ್ಮ ಬಳಿ ಮೂರೇ ಜನ ಇರಬಹುದು. ಯಂಕ, ನಾಣಿ, ಸೀನ ಅವರಿಂದಲೇ ರಾಜ್ಯಭಾರ ನಡೆಸುತ್ತಿದ್ದೇವೆ’ ಎಂದರು.

ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಜೆಡಿಎಸ್‌ನಲ್ಲಿ ಮಾತ್ರ ಅಪ್ಪ ಮಕ್ಕಳು, ಅಣ್ಣ ತಮ್ಮ ಇರುವುದೇ? ಬಿಜೆಪಿಯಲ್ಲಿ ಇಲ್ಲವೇ? ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಮಗನನ್ನು ಬಿಟ್ಟು ಇನ್ಯಾರು ಅಭ್ಯರ್ಥಿ ಇರಲಿಲ್ಲವೇ? ಎಷ್ಟು ಪಕ್ಷಗಳಲ್ಲಿ ಅಪ್ಪ- ಮಕ್ಕಳು, ಅಣ್ಣ - ತಮ್ಮ ಇಲ್ಲ. ಈ ಯಂಕ, ನಾಣಿ, ಸೀನ ಎಲ್ಲ ಯಡಿಯೂರಪ್ಪ ಅವರಿಗೇ ಅನ್ವಯಿಸುವುದು' ಎಂದರು.

ಉಗ್ರಪ್ಪ ಪರ ಪ್ರಚಾರ
'ಉಪಚುನಾವಣೆಯಲ್ಲಿ ಉಗ್ರಪ್ಪ ಅವರ ಪರ ಪ್ರಚಾರ ಮಾಡುತ್ತೇನೆ. ಕೊನೆಯ ದಿನ ಮೈಸೂರಿನ ಕಾರ್ಯಕ್ರಮ ಮುಗಿಸಿ ಬಳ್ಳಾರಿಗೆ ಹೋಗುತ್ತೇನೆ. ದೇವೇಗೌಡರೂ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ' ಎಂದರು.

'ನಾನು ಸಾಯುವವರೆಗೂ ಮುಖ್ಯಮಂತ್ರಿಯಾಗಿ ಇರುವ ಭ್ರಮೆ ಇಟ್ಟುಕೊಂಡಿಲ್ಲ. ಜನಸೇವೆಯೇ ನನ್ನ ಆದ್ಯತೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.