ADVERTISEMENT

ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧದ ದೋಷಾರೋಪ: ಮಧ್ಯಂತರ ಆದೇಶ ತಡೆ ತೆರವು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 15:25 IST
Last Updated 5 ಫೆಬ್ರುವರಿ 2026, 15:25 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಪ್ರಕರಣದಲ್ಲಿ; ಜೆಡಿಎಸ್‌ ಶಾಸಕ ಎಚ್‌.ಡಿ.ರೇವಣ್ಣ ವಿರುದ್ಧದ ದೋಷಾರೋಪ ನಿಗದಿ ಪ್ರಕ್ರಿಯೆ ಮುಂದೂಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್‌ ತೆರವುಗೊಳಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿ ವಜಾಗೊಳಿಸಬೇಕು’ ಎಂದು ಕೋರಿ ಎಚ್‌.ಡಿ.ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರೇವಣ್ಣ ಪರ ವಕೀಲರು, ‘ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲಿ ಹಾಜರಾಗಬೇಕಿರುವ ಕಾರಣ ಈ ಅರ್ಜಿಯ ವಿಚಾರಣೆ ಮುಂದೂಡಬೇಕು’ ಎಂದು ಕೋರಿ ಸಲ್ಲಿಸಿದ್ದ ಮೆಮೊ ಪರಿಶೀಲಿಸಿದ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ADVERTISEMENT

‘ಈ ಹಿಂದಿನ ವಿಚಾರಣೆಯಲ್ಲೂ ಅರ್ಜಿದಾರರ ಪರ ವಕೀಲರು ವಾದ ಮಂಡಿಸಲು ಸಿದ್ಧರಿರಲಿಲ್ಲ. ನಿರ್ದಿಷ್ಟ ದಿನದಂದು ವಾದ ಮಂಡಿಸಲು ಸಿದ್ಧವಾಗಿರುವಂತೆ ಸೂಚಿಸಿದ್ದರೂ ತಯಾರಾಗಿಲ್ಲ. ಈ ವಿಚಾರವನ್ನು ಅವರಿಗೆ ಕಳೆದ ತಿಂಗಳೇ ಸ್ಪಷ್ಟಪಡಿಸಲಾಗಿದೆ. ಈಗ ಪುನಃ ವಿಚಾರಣೆ ಮುಂದೂಡುವಂತೆ ಕೋರಿದ್ದಾರೆ. ಇದೊಂದು ಅಸಮರ್ಥನೀಯ ಮನವಿ. ಹೀಗಾಗಿ, ಚಾಲ್ತಿಯಲ್ಲಿರುವ ಮಧ್ಯಂತರ ಆದೇಶವನ್ನು ತೆರವುಗೊಳಿಸಲಾಗಿದೆ’ ಎಂದು ಆದೇಶಿಸಿ ವಿಚಾರಣೆಯನ್ನು ಇದೇ 26ಕ್ಕೆ ಮುಂದೂಡಿತು.

ರೇವಣ್ಣ ವಿರುದ್ಧ, ಭಾರತೀಯ ದಂಡ ಸಂಹಿತೆ–1860ರ ಕಲಂ 365, 368, 504, 506, 201, 109, 120ಬಿ ಜೊತೆಗೆ 34ರ ಅಡಿ 2024ರ ಮೇ 2ರಂದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.