ADVERTISEMENT

ಬಂಧನದಿಂದ ರಕ್ಷಣೆ ನೀಡಿದರೆ SIT ಮುಂದೆ ಇವತ್ತೇ ರೇವಣ್ಣ ಹಾಜರ್: ವಕೀಲರ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಮೇ 2024, 6:42 IST
Last Updated 4 ಮೇ 2024, 6:42 IST
ಎಚ್.ಡಿ. ರೇವಣ್ಣ
ಎಚ್.ಡಿ. ರೇವಣ್ಣ   

ಬೆಂಗಳೂರು: ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡ ಕ್ರಿಮಿನಲ್ ಪ್ರಕರಣದಲ್ಲಿ, ಮಹಿಳೆಯೊಬ್ಬರ ಅಪಹರಣದ ಪ್ರತ್ಯೇಕ ಎಫ್ಐಆರ್ ಗೆ ಸಂಬಂಧಿಸಿದಂತೆ 'ಹೊಳೆನರಸೀಪುರ ಶಾಸಕ‌ ಎಚ್.ಡಿ.ರೇವಣ್ಣ ಅವರನ್ನು ಬಂಧಿಸದಂತೆ ಕೋರ್ಟ್ ರಕ್ಷಣೆ ನೀಡಿದರೆ ಇವತ್ತೇ ಎಸ್ಐಟಿ ಮುಂದೆ ಹಾಜರಾಗುತ್ತಾರೆ' ಎಂದು ಅವರ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಭರವಸೆ ನೀಡಿದರು.

ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶನಿವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ರೇವಣ್ಣ ಪರ ಹೈಕೋರ್ಟ್ ನ ಹಿರಿಯ ವಕೀಲ ಮೂರ್ತಿ ಡಿ.ನಾಯಕ್ ಅವರು, ‘ಅರ್ಜಿದಾರ ರೇವಣ್ಣ ಅವರಿಗೆ ಜಾಮೀನು ನೀಡಿದರೆ ಇಂದೇ ಎಸ್ಐಟಿ ಮುಂದೆ ಹಾಜರಾಗುತ್ತಾರೆ‘ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಆಕ್ಷೇಪಣೆ ಸಲ್ಲಿಸಲು ಕಾಲಾವಾಕಾಶ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.

ಇಂದೇ ಆಕ್ಷೇಪಣೆ ಸಲ್ಲಿಸಿ ಎಂದು ಸೂಚಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಮಧ್ಯಾಹಕ್ಕೆ ಮುಂದೂಡಿದ್ದಾರೆ. ಅರ್ಜಿದಾರ ರೇವಣ್ಣ ಪರ ಹೈಕೋರ್ಟ್ ವಕೀಲ ಪವನ್ ಸಾಗರ್ ವಕಾಲತ್ತು ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.