
ಬೆಂಗಳೂರು: ಎ ಖಾತೆ ಹೆಸರಿನಲ್ಲಿ ರಾಜ್ಯ ಸರ್ಕಾರ ಬೆಂಗಳೂರು ಜನರನ್ನು ಲೂಟಿ ಹೊಡೆಯಲು ಹೊರಟಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಆರೋಪಕ್ಕೆ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ‘ಅವರ ಬುರುಡೆ ಪುರಾಣವನ್ನೆಲ್ಲಾ ಬಿಚ್ಚಿಡುತ್ತೇನೆ’ ಎಂದ ಕುಮಾರಸ್ವಾಮಿ ಅವರಿಗೆ, ‘ಎಲ್ಲವನ್ನೂ ಬಿಚ್ಚಿಡು. ನಿನ್ನದನ್ನೂ ಬಿಚ್ಚಿಡುವೆ’ ಎಂದು ಶಿವಕುಮಾರ್ ಗುಡುಗಿದ್ದಾರೆ.
‘ಎಲ್ಲವೂ ಬೋಗಸ್’
‘ಬಿ’ ಖಾತೆಗೆ ‘ಎ’ ಖಾತೆ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಜನರನ್ನು ಸುಲಿಗೆ ಮಾಡಲು ಹೊರಟಿದೆ. ಎ ಖಾತೆ, ಬಿ ಖಾತೆ ಎಂಬ ವ್ಯವಸ್ಥೆ ಎಲ್ಲಿಯೂ ಇಲ್ಲ. ಇವರೇ ಸೃಷ್ಟಿಸಿಕೊಂಡು, ಜನರಿಂದ ಲೂಟಿ ಮಾಡುತ್ತಿದ್ದಾರೆ. ‘ಬಿ’ ಖಾತೆಯ ನಿವೇಶನಗಳಲ್ಲಿ ನಿರ್ಮಿಸಿರುವ ಮನೆಗಳಿಂದ ಪ್ರವಾಹ ಉಂಟಾಗಿ, ಮನೆ ಕುಸಿಯುತ್ತದ್ದಂತೆ. ಅದನ್ನು ‘ಎ’ ಖಾತೆಗೆ ಮಾಡಿದರೆ ಎಲ್ಲವೂ ಸರಿ ಹೋಗುತ್ತದಂತೆ. ಇದನ್ನು ಒಪ್ಪಲು ಸಾಧ್ಯವೇ?
ಚರ್ಚೆಗೆ ಬರುವಂತಹ ಯೋಗ್ಯತೆ ಆ ವ್ಯಕ್ತಿ ಉಳಿಸಿಕೊಂಡಿದ್ದಾರಾ? ಚರ್ಚೆಗೆ ಕರೆಯುವ ಯೋಗ್ಯತೆ ಅವರಿಗೆ ಇದೆಯಾ? ರಾಜ್ಯಕ್ಕೆ ಕೈಗಾರಿಕೆ ತರುವುದು ನನ್ನ ಕೆಲಸವಲ್ಲ. ಅದು ರಾಜ್ಯ ಸರ್ಕಾರದ ಕೆಲಸ. ನಾನು ಮುಖ್ಯಮಂತ್ರಿ ಆಗಿದ್ದಾಗ 9 ಕೈಗಾರಿಕಾ ಕ್ಲಸ್ಟರ್‌ಗಳಿಗೆ ಅನುಮೋದನೆ ನೀಡಿದ್ದೆ. ಅವುಗಳ ಸ್ಥಿತಿ ಏನಾಗಿದೆ? ಕೈಗಾರಿಕೆಗಳು ಇಲ್ಲಿಗೆ ಬರಬೇಕು ಎಂಬಂತಹ ವಾತಾವರಣವನ್ನು ಇವರು ಸೃಷ್ಟಿಸಬೇಕು. ಅದನ್ನು ಬಿಟ್ಟು ಬೇರೆಲ್ಲಾ ಮಾಡಿಕೊಂಡು ಕೂತಿದ್ದಾರೆ. ಮತ್ತೆ ಬರುತ್ತೇನೆ, ಇವರ ಬುರುಡೆ ವ್ಯವಹಾರವನ್ನೆಲ್ಲಾ ಬಿಚ್ಚಿಡುತ್ತೇನೆ.
ಈ ಸರ್ಕಾರದ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಐದು ವರ್ಷ ನನಗೆ ಆಡಳಿತ ನೀಡಿದರೆ ಎಲ್ಲವನ್ನೂ ಸರಿ ಮಾಡುತ್ತೇನೆ. ಈ ಬಾರಿ ಖಂಡಿತಾ ಸರ್ಕಾರ ರಚಿಸುತ್ತೇವೆ. ನಮ್ಮದು ಸ್ವತಂತ್ರ ಸರ್ಕಾರ ಬರುತ್ತದೆಯೋ ಅಥವಾ ಮೈತ್ರಿ ಸರ್ಕಾರ ಬರುತ್ತದೆಯೋ ಎಂಬುದನ್ನು ಜನರು ನಿರ್ಧರಿಸಲಿದ್ದಾರೆ. ಈ ಕ್ಷಣದವರೆಗೂ ಜೆಡಿಎಸ್–ಬಿಜೆಪಿ ಮೈತ್ರಿ ಚೆನ್ನಾಗಿಯೇ ಇದೆ
ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ
ಬಹಿರಂಗ ಚರ್ಚೆಗೆ ಬನ್ನಿ ಎಂದು ನಾನು ಕರೆಯುತ್ತಲೇ ಇದ್ದೇನೆ. ಎ ಖಾತೆ ವಿಚಾರದಲ್ಲಿ ಯಾವ ಭ್ರಷ್ಟಾಚಾರ ನಡೆಯುತ್ತಿದೆ? ಜನರ ಆಸ್ತಿ ದಾಖಲೆ ಸರಿಪಡಿಸುವುದು ನಮ್ಮ ಆರನೇ ಗ್ಯಾರಂಟಿ. ಇ –ಖಾತೆ ಮಾಡಿಕೊಡಲು ಅವರಿಂದ ಆಗಲಿಲ್ಲ. ಅವರಿಗೆ ಇಂತಹ ಯಾವುದೇ ಆಲೋಚನೆಗಳು ಇರಲಿಲ್ಲ. ಕುಮಾರಸ್ವಾಮಿ ಅವರು ಕೈಗಾರಿಕೆ ತರುತ್ತೇನೆ ಎನ್ನುತ್ತಾರಲ್ಲ, ತರಲಿ. ಎಲ್ಲಿ ಮಾಡುತ್ತಾರೆ ಎಂದು ಅವರೇ ಪಟ್ಟಿ ನೀಡಲಿ. ಭೂಸ್ವಾಧೀನ ಮಾಡಿಕೊಡುತ್ತೇವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆ, ವಾದ–ವಿವಾದ ಇರಬೇಕು. ಹಿಟ್ ಅಂಡ್ ರನ್, ಬ್ಲ್ಯಾಕ್‌ಮೇಲ್ ಮಾಡುವುದಲ್ಲ. ನನ್ನ ವಿರುದ್ಧ ದಾಖಲೆಗಳು ಇದ್ದರೆ ಅದನ್ನು ಬಹಿರಂಗಪಡಿಸಲಿ. ಸಾರ್ವಜನಿಕವಾಗಿ ಬಂದು ಉತ್ತರ ನೀಡಲಿ. ಸದನದಲ್ಲಿ ಜೇಬು ತೋರಿಸಿ ಪೆನ್ ಡ್ರೈವ್ ತೆಗೆಯುತ್ತೇನೆ, ತೆಗೆಯುತ್ತೇನೆ ಎಂದು ಹೇಳಿದಂತೆ ಅಲ್ಲ. ಕುಮಾರಸ್ವಾಮಿ, ನಾನು ಏನು ಮಾಡಿದ್ದೇನೆ ಮತ್ತು ನನ್ನ ಹುಳುಕು ಏನು ಎಂಬುದನ್ನು ನೀನು ಹೇಳು. ನಿನ್ನದನ್ನು ನಾನು ಹೇಳುತ್ತೇನೆ. ನನ್ನದನ್ನು ನೀನು ಬಿಚ್ಚಿಡು, ನಿನ್ನದನ್ನು ನಾನು ಬಿಚ್ಚಿಡುತ್ತೇನೆ.
ನಮ್ಮ ಸರ್ಕಾರ ಬರುತ್ತದೆ ಎಂಬ ಡೈಲಾಗ್ ಅನ್ನು ಎಷ್ಟು ಸಾರಿ ಹೇಳಿ ಆಗಿದೆ. ಅದನ್ನು ಕೇಳಿ, ಕೇಳಿ ಸಾಕಾಗಿದೆ. ಕುಮಾರಸ್ವಾಮಿ ನಾಯಕತ್ವದಲ್ಲಿ ಈ ಹಿಂದೆ ಜೆಡಿಎಸ್ 18 ಸ್ಥಾನಕ್ಕೆ ಇಳಿದಿತ್ತು. ಮುಂದಿನ ಬಾರಿ 8 ಅಥವಾ 9 ಸ್ಥಾನಗಳಿಗೆ ಕುಸಿಯುತ್ತದೆ ಅಷ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.